ಪ್ರೇಮದಾಸ ಪ್ರತಿಪಕ್ಷ ನಾಯಕರಾಗಲಿ: ಶ್ರೀಲಂಕಾ ತಮಿಳರ ಆಗ್ರಹ

ಕೊಲಂಬೊ, ನ. 23: ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡಿರುವ ಅಭ್ಯರ್ಥಿ ಸಜಿತ್ ಪ್ರೇಮದಾಸ, ಮಾಜಿ ಪ್ರಧಾನಿ ರನಿಲ್ ವಿಕ್ರಮೆಸಿಂೆಯ ಬದಲು ಪ್ರಧಾನ ಪ್ರತಿಪಕ್ಷ ನಾಯಕರಾಗಬೇಕು ಎಂದು ಶ್ರೀಲಂಕಾದ ತಮಿಳು ಅಲ್ಪಸಂಖ್ಯಾತರು ಬಯಸುತ್ತಾರೆ ಎಂದು ಪ್ರಧಾನ ತಮಿಳು ಪಕ್ಷ ಟಿಎನ್‌ಎ ಶುಕ್ರವಾರ ಹೇಳಿದೆ.
ತಮಿಳ್ ನ್ಯಾಶನಲ್ ಅಲಯನ್ಸ್ (ಟಿಎನ್‌ಎ) ಶ್ರೀಲಂಕಾದ ರಾಜಕೀಯ ಮಿತ್ರಕೂಟವಾಗಿದ್ದು, ದೇಶದ ತಮಿಳು ಸಮುದಾಯವನ್ನು ಪ್ರತನಿಧಿಸುತ್ತದೆ. 2001 ಅಕ್ಟೋಬರ್‌ನಲ್ಲಿ ಸ್ಥಾಪನೆಯಾಗಿರುವ ಟಿಎನ್‌ಎ, ಶ್ರೀಲಂಕಾದ ಆಂತರಿಕ ಯುದ್ಧ ಕೊನೆಗೊಂಡ ಬಳಿಕ ತಮಿಳರಿಗೆ ಸ್ವತಂತ್ರ ದೇಶದ ಬೇಡಿಕೆಯನ್ನು ಕೈಬಿಟ್ಟಿದೆ ಹಾಗೂ ಪ್ರಾದೇಶಿಕ ಸ್ವಯಂ-ಆಡಳಿತವನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಾಗಿ ಅದು ಹೇಳಿದೆ.
ಪರಾಜಿತ ಅಭ್ಯರ್ಥಿ ಪ್ರೇಮದಾಸರ ಪರವಾಗಿ ಬೃಹತ್ ಪ್ರಮಾಣದಲ್ಲಿ ಮತದಾನ ಮಾಡಿರುವ ತಮಿಳರು, ಪ್ರೇಮದಾಸ ಪ್ರಧಾನ ಪ್ರತಿಪಕ್ಷ ನಾಯಕನಾಗಬೇಕೆಂದು ಬಯಸಿದ್ದಾರೆ ಎಂದು ಟಿಎನ್‌ಎ ತಿಳಿಸಿದೆ.
ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಸೇನಾಧಿಕಾರಿ ಗೋತಬಯ ರಾಜಪಕ್ಸ ಭರ್ಜರಿ ಬಹುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.





