ನಾನಲ್ಲದಿದ್ದರೆ 14 ನಿಮಿಷದಲ್ಲಿ ಹಾಂಕಾಂಗ್ ಸರ್ವನಾಶವಾಗುತ್ತಿತ್ತು: ಟ್ರಂಪ್

ವಾಶಿಂಗ್ಟನ್, ನ. 23: “ನಾನಲ್ಲದಿದ್ದರೆ ಹಾಂಕಾಂಗ್ 14 ನಿಮಿಷಗಳಲ್ಲಿ ಚೀನಿ ಸೈನಿಕರಿಂದ ಸರ್ವನಾಶವಾಗುತ್ತಿತ್ತು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿಕೊಂಡಿದ್ದಾರೆ.
‘‘ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ಪರ ಚಳವಳಿಯನ್ನು ದಮನಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಲ್ಲಿಗೆ ಚೀನಿ ಸೈನಿಕರನ್ನು ಕಳುಹಿಸುವವರಿದ್ದರು. ಹಾಗೆ ಮಾಡಬೇಡಿ ಎಂದು ನಾನು ಹೇಳಿದ ಬಳಿಕ ಅವರು ಹಿಂದೆ ಸರಿದರು’’ ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ನುಡಿದರು. ‘‘ನಾನಲ್ಲದಿದ್ದರೆ, ಹಾಂಕಾಂಗ್ ಕೇವಲ 14 ನಿಮಿಷಗಳಲ್ಲಿ ಧೂಳೀಪಟವಾಗುತ್ತಿತ್ತು’’ ಎಂದು ಟ್ರಂಪ್ ಹೇಳಿದರು.
‘‘ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 10 ಲಕ್ಷ ಸೈನಿಕರನ್ನು ಹಾಂಕಾಂಗ್‌ನ ಹೊರಗೆ ನಿಲ್ಲಿಸಿದ್ದಾರೆ. ಒಳಗೆ ಹೋಗಬೇಡಿ ಎಂದು ನಾನು ಹೇಳಿರುವುದರಿಂದ ಅವರು ಹೋಗಿಲ್ಲ’’ ಎಂದರು.
‘‘ದಯವಿಟ್ಟು ಹಾಗೆ ಮಾಡಬೇಡಿ. ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ. ಅದು ವ್ಯಾಪಾರ ಒಪ್ಪಂದದ ಮೇಲೆ ಅಗಾಧ ನಕಾರತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ನಾನು ಹೇಳಿದ್ದೇನೆ’’ ಎಂದು ಅಮೆರಿಕ ಅಧ್ಯಕ್ಷರು ಹೇಳಿಕೊಂಡರು.







