ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರು ಬಾರಿ 200ಕ್ಕೂ ಅಧಿಕ ರನ್ ಬಿಟ್ಟುಕೊಟ್ಟ ಯಾಸಿರ್
ಬ್ರಿಸ್ಬೇನ್, ನ.23: ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಯಾಸಿರ್ ಶಾ 48.4 ಓವರ್‌ಗಳ ಬೌಲಿಂಗ್‌ನಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದರೂ 205 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡರು.
33ರ ಹರೆಯದ ಶಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರು ಬಾರಿ ಇನಿಂಗ್ಸ್ ವೊಂದರಲ್ಲಿ 200 ಹಾಗೂ ಅದಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟಿರುವ ಮೊದಲ ಬೌಲರ್ ಎಂಬ ಅಪಕೀರ್ತಿಗೂ ಒಳಗಾದರು.
ಆಸ್ಟ್ರೇಲಿಯ ವಿರುದ್ಧ 2ನೇ ಬಾರಿ 200ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿದ್ದಾರೆ. 2016ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲ್ಲಿ 41 ಓವರ್‌ಗಳಲ್ಲಿ 207 ರನ್ ನೀಡಿದ್ದರು. ಆಗ ಅವರು 3 ವಿಕೆಟ್‌ಗಳನ್ನು ಪಡೆದಿದ್ದರು.
ಲೆಗ್ ಸ್ಪಿನ್ನರ್ 2016ರ ಜುಲೈನಲ್ಲಿ ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿ 200ಕ್ಕೂ ಅಧಿಕ ರನ್ ಸೋರಿಕೆ ಮಾಡಿದ್ದರು.ಆ ಪಂದ್ಯದಲ್ಲಿ 54 ಓವರ್‌ಗಳ ಬೌಲಿಂಗ್ ಮಾಡಿದ್ದ ಯಾಸಿರ್ 213 ರನ್ ಬಿಟ್ಟುಕೊಟ್ಟು ಕೇವಲ 1 ವಿಕೆಟ್ ಪಡೆದಿದ್ದರು.
ಈಗ ನಡೆಯುತ್ತಿರುವ ಆಸೀಸ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 2ನೇ ದಿನದಾಟವಾದ ಶುಕ್ರವಾರ ಜೋ ಬರ್ನ್ಸ್ ವಿಕೆಟ್ ಪಡೆದು ಶತಕವನ್ನು ನಿರಾಕರಿಸಿದ್ದ ಯಾಸಿರ್ ಶಾ ಇಂದು ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಝಲ್‌ವುಡ್ ವಿಕೆಟ್‌ಗಳನ್ನು ಉರುಳಿಸಿದ್ದರು.
ಯಾಸಿರ್ ಶಾ ಟೆಸ್ಟ್ ಕ್ರಿಕೆಟ್‌ನಲ್ಲಿ ಏಳನೇ ಬಾರಿ ಸ್ಟೀವ್ ಸ್ಮಿತ್ ವಿಕೆಟ್‌ನ್ನು ಉರುಳಿಸಿದರು. ಸ್ಮಿತ್ ಹಾಗೂ ಶಾ ಒಟ್ಟು 6 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ.







