ಸತ್ಯಜಿತ್ ರೇ ಬದಲು ಗುಲ್ಝಾರ್ ಭಾವಚಿತ್ರ ಪ್ರಕಟಿಸಿದ ಐಎಫ್‌ಎಫ್‌ಐ

ಹೊಸದಿಲ್ಲಿ, ನ. 23: ತನ್ನ ವೆಬ್‌ಸೈಟ್‌ನಲ್ಲಿ ಸತ್ಯಜಿತ್ ರೇ ಅವರ ಭಾವಚಿತ್ರಕ್ಕೆ ಬದಲು ಸಾಹಿತಿ ಗುಲ್ಝಾರ್ ಅವರ ಬಾವಚಿತ್ರ ಪ್ರಕಟಿಸುವ ಮೂಲಕ ಇಂಟರ್‌ನ್ಯಾಷನಲ್ ಪಿಲ್ಮ್ ಫೆಸ್ಟಿವಲ್ ಇಂಡಿಯಾ (ಐಎಫ್‌ಎಫ್‌ಐ) ಎಡವಟ್ಟು ಮಾಡಿಕೊಂಡಿದೆ.
ಸತ್ಯಜಿತ್ ರೇ ಅವರ ಭಾವಚಿತ್ರದ ಬದಲು ಗುಲ್ಜಾರ್ ಅವರ ಭಾವಚಿತ್ರ ಪ್ರಕಟಿಸಿದ ವೆಬ್‌ಸೈಟ್‌ನ ಗೌರವಾರ್ಪಣೆ ಪೇಜ್‌ನ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಐಎಫ್‌ಎಫ್‌ಐ ತನ್ನ ಪ್ರಮಾದವನ್ನು ಸರಿಪಡಿಸಿಕೊಂಡಿದೆ.
ಐಎಫ್‌ಎಫ್‌ಐಯ ವೆಬ್‌ಸೈಟ್ ಗೌರವಾರ್ಪಣೆ ವಿಭಾಗದಲ್ಲಿ ಸತ್ಯಜಿತ್ ರೇ ಅವರ 1989ರ ಗಣಶತ್ರು ಚಿತ್ರದ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪುಟ ನಿರ್ದೇಶಕರ ಜೀವನ ಚರಿತ್ರೆಗಾಗಿ ಮೀಸಲಿರಿಸಲಾಗಿದೆ. ಈ ವಿಭಾಗದಲ್ಲಿ ಸತ್ಯಜಿತ್ ರೇ ಅವರನ್ನು ಗಣಶತ್ರು ನಿರ್ದೇಶಕ ಎಂದು ಉಲ್ಲೇಖಿಸಲಾಗಿದೆ. ಆದರೆ, ಗುಲ್ಜಾರ್ ಅವರ ಭಾವಚಿತ್ರವನ್ನು ಹಾಕಲಾಗಿದೆ.
ವೆಬ್‌ಸೈಟ್ ಬಳಕೆದಾರರೊಬ್ಬರು ಈ ಪ್ರಮಾದ ಗುರುತಿಸಿದ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರು. ಈ ಸ್ಕ್ರೀನ್ ಶಾಟ್ ವೈರಲ್ ಆಗಿತ್ತು. ಅನಂತರವೇ ಐಎಫ್‌ಎಫ್‌ಐ ಭಾವಚಿತ್ರವನ್ನು ಬದಲಾಯಿಸಿತ್ತು.
50ನೇ ಇಂಟರ್‌ನ್ಯಾಶನಲ್ ಪಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಗೋವಾದಲ್ಲಿ ಬುಧವಾರ ಆರಂಭವಾಗಿದೆ.





