ಪಾಕಿಸ್ತಾನ ವಿರುದ್ಧ ಪಂದ್ಯದಿಂದ ಮುಕುಂದ್ ಹೊರಕ್ಕೆ
ಡೇವಿಸ್ ಕಪ್

ಹೊಸದಿಲ್ಲಿ, ನ.23: ಯುವ ಟೆನಿಸ್ ತಾರೆ ಶಶಿ ಮುಕುಂದ್ ಪಾಕಿಸ್ತಾನ ವಿರುದ್ಧ ಮುಂಬರುವ ಡೇವಿಸ್ ಕಪ್ ಪಂದ್ಯದಿಂದ ಹೊರಗುಳಿದಿದ್ದಾರೆ. ಕಾಲುನೋವಿನ ಕಾರಣದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಮೀಸಲು ಆಟಗಾರನಾಗಿ ನೇಮಕಗೊಂಡಿದ್ದ ಮುಕುಂದ್ ಪೋರ್ಚುಗಲ್ ಪರ ಟೂರ್ನಮೆಂಟ್ ಆಡುವಾಗ ಗಾಯಗೊಂಡಿದ್ದರು.
‘‘ದುರದೃಷ್ಟವಶಾತ್ ಶಶಿ ನಮ್ಮಂದಿಗೆ ಬರುತ್ತಿಲ್ಲ. ಸಹ ಆಟಗಾರ ಪೂರವ್ ರಾಜಾ ಅವರೊಂದಿಗೆ ಆಡುತ್ತಿದ್ದಾಗ ಕಾಲಿಗೆ ಗಾಯವಾಗಿದೆ ಎಂದು ಅವರು ನಮಗೆ ಮಾಹಿತಿ ನೀಡಿದ್ದಾರೆ’’ ಎಂದು ಡಿಎಲ್‌ಟಿಎಯಲ್ಲಿ ತಂಡದ ಅಭ್ಯಾಸ ನಡೆಸುತ್ತಿದ್ದಾಗ ಡೇವಿಸ್ ಕಪ್ ಕೋಚ್ ಝೀಶಾನ್ ಅಲಿ ಪಿಟಿಐಗೆ ತಿಳಿಸಿದ್ದಾರೆ. ಮುಕುಂದ್ ಗಾಯದ ಸಮಸ್ಯೆಯಿಂದ ಡೇವಿಸ್ ಕಪ್ ಪಂದ್ಯದಿಂದ ಹೊರಗುಳಿಯುತ್ತಿರುವ ಭಾರತದ ಎರಡನೇ ಆಟಗಾರನಾಗಿದ್ದಾರೆ. ರೋಹನ್ ಬೋಪಣ್ಣ ಭುಜನೋವಿನ ಕಾರಣದಿಂದ ಟೂರ್ನಿಯಿಂದ ಈಗಾಗಲೇ ಹೊರ ನಡೆದಿದ್ದಾರೆ.
‘‘ಮುಕುಂದ್ ಬದಲಿಗೆ ಎನ್.ಶ್ರೀರಾಮ್ ಬಾಲಾಜಿ ಅವರನ್ನು ಕಝಖ್‌ಸ್ತಾನದ ನೂರ್ ಸುಲ್ತಾನ್‌ಗೆ ಕರೆದುಕೊಂಡು ಹೋಗಲು ನಾವು ಬಯಸಿದ್ದೇವೆ. ಆದರೆ ಸೀಮಿತ ಅವಧಿಯಲ್ಲಿ ವೀಸಾ ಪಡೆಯುವ ಸುಲಭಸಾಧ್ಯವಲ್ಲ. ಬಾಲಾಜಿ ಅವರನ್ನು 8 ಸದಸ್ಯರ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಆದರೆ ಅವರು ಗುರುವಾರದಿಂದ ಭಾರತೀಯ ತಂಡದ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದಾರೆ’’ ಎಂದರು.
ಮುಕುಂದ್ ಅನುಪಸ್ಥಿತಿಯಲ್ಲಿ ಡಬಲ್ಸ್ ಜೊತೆಗಾರನನ್ನು ಆಯ್ಕೆ ಮಾಡುವುದರಲ್ಲಿ ವ್ಯಸ್ತರಾಗಿರುವ ನಾಯಕ ರೋಹಿತ್ ರಾಜ್‌ಪಾಲ್, ‘‘ವಿದೇಶದ ಪಂದ್ಯದಲ್ಲಿ ವಿಭಿನ್ನ ಟ್ರೈನಿಂಗ್ ಜೊತೆಗಾರರು ಇರುವುದು ಯಾವಾಗಲೂ ಅನುಕೂಲಕರವಾಗಿರುತ್ತದೆ. ಲಿಯಾಂಡರ್ ಪೇಸ್ ಡಬಲ್ಸ್ ಜೊತೆಗಾರನಾಗಿ ಸಾಕೇತ್ ಮೈನೇನಿ ಹಾಗೂ ಜೀವನ್ ನೆಡುನ್‌ಚೆಝಿಯನ್‌ರನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿದ್ದೇವೆ’’ ಎಂದರು.







