ವೈಟ್, ಬ್ಲಾಕ್ ಟಾಪಿಂಗ್ ಕಾಮಗಾರಿಯಲ್ಲಿ ಅವ್ಯವಹಾರ: ಆರೋಪ
ಸಮಗ್ರ ತನಿಖೆಗೆ ಆಮ್ ಆದ್ಮಿ ಪಾರ್ಟಿ ಒತ್ತಾಯ
ಬೆಂಗಳೂರು, ನ.23: ವೈಟ್ ಮತ್ತು ಬ್ಲಾಕ್ ಟಾಪಿಂಗ್ ಎರಡೂ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ನಗರಾಧ್ಯಕ್ಷ ಮೋಹನ್ ದಾಸ್, ನಗರದಲ್ಲಿ ನಡೆದಿರುವ ವೈಟ್ ಮತ್ತು ಬ್ಲಾಕ್ ಟಾಪಿಂಗ್ ಕಾಮಗಾರಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಕೋಟ್ಯಂತರ ರೂ. ಅವ್ಯವಹಾರ ನಡೆಸಿವೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ 1,800 ಕೋಟಿ ರೂ. ವೆಚ್ಚದ ಉಕ್ಕಿನ ಸೇತುವೆ ನಿರ್ಮಾಣ ಮಾಡಿ ಹಣ ದೋಚಲು ಹುನ್ನಾರ ನಡೆಸಿತ್ತು, ವೈಟ್ ಟಾಪಿಂಗ್ ಕಾಮಗಾರಿ, ಡಾಂಬರೀಕರಣ, ಚರಂಡಿ, ಫುಟ್ಬಾತ್ ದುರಸ್ತಿ ಮಾಡಲಾಗಿದ್ದ ಸಿ.ವಿ. ರಾಮನ್ ರಸ್ತೆ ಬಸವನಗುಡಿಯ ಕೃಷ್ಣ ರಾಜರಸ್ತೆ, ಹೆಬ್ಬಾಳ ವರ್ತುಲ ರಸ್ತೆಗಳಿಗೆ ಪುನಃ ವೈಟ್ ಟಾಪಿಂಗ್ ಮಾಡಲಾಗಿದೆ. ಈ ಕಾಮಗಾರಿ ಹೆಸರಿನಲ್ಲಿ ಕೋಟ್ಯಂತರ ರೂ. ಲೂಟಿ ಹೊಡೆಯಲಾಗಿದೆ ಎಂದು ದೂರಿದರು.
ವೈಟ್ ಮತ್ತು ಬ್ಲಾಕ್ ಟಾಪಿಂಗ್ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರ ಸಮಗ್ರ ತನಿಖೆ ನಡೆಸುವುದು, ಉತ್ತಮ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುತ್ತಿರುವ ಟೆಂಡರ್ ಶೂರ್ ಕಾಮಗಾರಿಯನ್ನೇ ನಡೆಸಬೇಕೆಂದು ಅವರು ಆಗ್ರಹಿಸಿದರು.







