ಬಿಜೆಪಿಯತ್ತ ಕಾಂಗ್ರೆಸ್ ಸದಸ್ಯರ ಒಲವು: ಬಹಿರಂಗ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಕೈ' ನಾಯಕರು

ಬೆಂಗಳೂರು, ನ.23: ಕೆಲ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಅನರ್ಹ ಶಾಸಕರ ಪರವಾಗಿ ಉಪ ಚುನಾವಣೆಗೆ ಪ್ರಚಾರ ನಡೆಸುತ್ತಿರುವುದರಿಂದ ಕಾಂಗ್ರೆಸ್ ವರಿಷ್ಠರ ಕೆಂಗಣ್ಣಿಗೆ ತುತ್ತಾಗಿರುವುದಲ್ಲದೆ, ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಲು ಮುಂದಾಗಿದ್ದಾರೆ.
ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಕಾಂಗ್ರೆಸ್‌ನ ಕೆಲ ಪಾಲಿಕೆ ಸದಸ್ಯರು ತಮ್ಮ ರಾಜಕೀಯ ಗುರುಗಳಾದ ಅನರ್ಹ ಶಾಸಕರ ಅಣತಿಯಂತೆ ಅನಿವಾರ್ಯವಾಗಿ ಬಿಜೆಪಿಗೆ ಸೇರುವ ಮನಸ್ಸು ಮಾಡಿದ್ದು, ಸದ್ಯದಲ್ಲೇ ಹತ್ತಕ್ಕೂ ಹೆಚ್ಚು ಕಾಂಗ್ರೆಸ್ ಪಾಲಿಕೆ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದರೆ, ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಅವರು ಪ್ರತಿನಿಧಿಸುತ್ತಿರುವ ವಾರ್ಡ್‌ಗೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ಹಾಗೂ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗುವ ಕೆಲ ಪಾಲಿಕೆ ಸದಸ್ಯರಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಬಿಜೆಪಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಬಿಬಿಎಂಪಿಯಲ್ಲಿ ಬಿಜೆಪಿ ಹಾಗೂ ತಮ್ಮ ಪರವಾಗಿಯೇ ಚುನಾವಣಾ ಪ್ರಚಾರ ಕೈಗೊಳ್ಳಬೇಕು ಎಂದು ತಮ್ಮ ಬೆಂಬಲಿಗ ಆಪ್ತ ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ಅನರ್ಹ ಶಾಸಕರು ಸೂಚನೆ ನೀಡಿದ್ದಾರೆ. ಅಲ್ಲದೇ, ಬಿಜೆಪಿ ಪಕ್ಷದ ವರಿಷ್ಠರಿಂದ ಅಭಯ ಪಡೆದಿರುವ ಕಾಂಗ್ರೆಸ್‌ನ ಕೆಲ ಪಾಲಿಕೆ ಸದಸ್ಯರು ಬಿಜೆಪಿ ಪರವಾಗಿ ಬಹಿರಂಗ ಪ್ರಚಾರಕ್ಕೆ ಇಳಿದಿದ್ದಾರೆ. ಉಪಚುನಾವಣೆ ಮುಗಿದ ಬಳಿಕ ಈ ಕಾಂಗ್ರೆಸ್ ಸದಸ್ಯರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಸಚಿವ ಆರ್. ಅಶೋಕ್ ಹಾಗೂ ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ. ಇನ್ನೊಂದೆಡೆ ಶಿವಾಜಿನಗರ ಕ್ಷೇತ್ರದಿಂದ ತಮಗೆ ಟಿಕೆಟ್ ಸಿಗದಿದ್ದರೂ, ನಿರಾಶರಾಗದ ರೋಷನ್ ಬೇಗ್ ಬಿಜೆಪಿ ಪರ ಕೆಲಸ ಮಾಡಲಾರಂಭಿಸಿದ್ದಾರೆ. ಅವರ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂ.ಕೆ. ಗುಣಶೇಖರ್ ಮತ್ತು ಇತರ ಸದಸ್ಯರು, ಬಿಜೆಪಿ ಅಭ್ಯರ್ಥಿ ಪರವಾಗಿ ಈಗಾಗಲೇ ಪ್ರಚಾರ ನಡೆಸುತ್ತಿದ್ದಾರೆ.







