'ನಾಪತ್ತೆ'ಯಾಗಿದ್ದ ಎನ್ ಸಿಪಿ ಶಾಸಕ ಪ್ರತ್ಯಕ್ಷ: ಶರದ್ ಪವಾರ್ ಗೆ ಬೆಂಬಲ ಘೋಷಣೆ
Photo: facebook.com/mladaulatdaroda/
ಮುಂಬೈ, ನ.24: ಶನಿವಾರದ ನಾಟಕೀಯ ಬೆಳವಣಿಗೆಗಳ ಬಳಿಕ ತನ್ನ ವಿರುದ್ಧ ನಾಪತ್ತೆ ದೂರು ದಾಖಲಾಗಿದ್ದ ಎನ್ಸಿಪಿ ಶಾಸಕ ದೌಲತ್ ದರೋಡಾ ಅವರು ರವಿವಾರ ಮಧ್ಯಾಹ್ನ ಪ್ರತ್ಯಕ್ಷರಾಗಿದ್ದು,ಪಕ್ಷದ ವರಿಷ್ಠ ಶರದ ಪವಾರ ಅವರಿಗೆ ತನ್ನ ಬೆಂಬಲವನ್ನು ಘೋಷಿಸಿದ್ದಾರೆ.
ತಾನು ಎನ್ಸಿಪಿ ತೊರೆಯುವ ಪ್ರಶ್ನೆಯೇ ಇಲ್ಲ ಮತ್ತು ಪಕ್ಷದ ನಾಯಕತ್ವವು ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಪಾಲಿಸುತ್ತೇನೆ ಎಂದು ಅವರು ಹೇಳಿದರು. ಈಗ ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಂಡಿರುವ ಅಜಿತ್ ಪವಾರ ಅವರು ಶನಿವಾರ ಬೆಳಿಗ್ಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರ ಜೊತೆಯಲ್ಲಿದ್ದ ಎನ್ಸಿಪಿ ಶಾಸಕರಲ್ಲಿ ದರೋಡಾ ಓರ್ವರಾಗಿದ್ದರು.
ಶನಿವಾರದಿಂದ ಸಂಪರ್ಕಕ್ಕೆ ಸಿಗದಿದ್ದ ಇತರ ಮೂವರು ಎನ್ಸಿಪಿ ಶಾಸಕರಾದ ಮಾಣಿಕರಾವ್ ಕೋಕಟೆ,ಅನಿಲ ಪಾಟೀಲ ಮತ್ತು ನಿತಿನ್ ಪವಾರ್ ಅವರೂ ರವಿವಾರ ಪ್ರತ್ಯಕ್ಷರಾಗಿ ಶರದ ಪವಾರಗೆ ಬೆಂಬಲವನ್ನು ಘೋಷಿಸಿದರು. ನಿತಿನ್ ಪವಾರ್ ವಿರುದ್ಧವೂ ನಾಪತ್ತೆ ದೂರು ದಾಖಲಾಗಿತ್ತು.
ಕನಿಷ್ಠ 49ಶಾಸಕರು ಪಕ್ಷದ ಜೊತೆಯಲ್ಲಿದ್ದಾರೆ ಮತ್ತು ಕನಿಷ್ಠ ಇನ್ನೋರ್ವ ಶಾಸಕ ಪಕ್ಷದ ಮಡಿಲಿಗೆ ಮರಳುವ ನಿರೀಕ್ಷೆಯಿದೆ. ಅಜಿತ ಪವಾರ ಅವರು ಪಕ್ಷಕ್ಕೆ ವಾಪಸಾಗುವುದಿಲ್ಲ ಎಂದು ಹೇಳಿದ ಹಿರಿಯ ಎನ್ಸಿಪಿ ನಾಯಕ ಛಗನ್ ಭುಜಬಲ್ ಅವರು,ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಶೇ.100ರಷ್ಟು ಸರಕಾರವನ್ನು ರಚಿಸಲಿವೆ ಎಂದರು.
ತನ್ಮಧ್ಯೆ ಸದನದಲ್ಲಿ ಸಂಭಾವ್ಯ ಬಲಾಬಲ ಪರೀಕ್ಷೆಯ ಮೆಲೆ ಕಣ್ಣಿರಿಸಿರುವ ಈ ಮೂರೂ ಪಕ್ಷಗಳು ತಮ್ಮ ಶಾಸಕರನ್ನು ಮುಂಬೈನ ರೆಸಾರ್ಟ್ಗಳು ಮತ್ತು ಹೋಟೇಲ್ಗಳಿಗೆ ಸಾಗಿಸಿವೆ.