ಬೆಳುವಾಯಿಯಲ್ಲಿ ಅಪಘಾತ: ಶಾಲಾ ಪ್ರವಾಸಕ್ಕೆ ತೆರಳುತ್ತಿದ್ದ ಬಾಲಕ ಮೃತ್ಯು

ಮಂಗಳೂರು, ನ. 24: ಕಾರ್ಕಳದಿಂದ ಮೂಡುಬಿದಿರೆಗೆ ಬರುತ್ತಿದ್ದ ವೇಳೆ ಸಂಭವಿಸಿದ ಸ್ಕೂಟರ್-ಕಾರು ಅಪಘಾತದಲ್ಲಿ ಬಾಲಕ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.
ಕಾರ್ಕಳ ನಿವಾಸಿ ಸಹಲ್ ಅಹ್ಮದ್ (14) ಮೃತ ಬಾಲಕ.
ಮೃತ ಬಾಲಕನು ಮೂಡುಬಿದಿರೆಯ ಖಾಸಗಿ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿ. ನ. 25ರಂದು ಶಾಲೆ ವತಿಯಿಂದ ಪ್ರವಾಸ ಏರ್ಪಡಿಸಲಾಗಿತ್ತು. ಹಾಗಾಗಿ ಬಾಲಕ ಸಂಬಂಧಿಯೊಬ್ಬರ ಜೊತೆ ಕಾರ್ಕಳದಿಂದ ಮೂಡುಬಿದಿರೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ. ಬೆಳುವಾಯಿಯ ಕೆಸರುಗದ್ದೆ ಸಮೀಪಿಸುತ್ತಿದ್ದಂತೆ ಸ್ಕೂಟರ್ ಗೆ ಕಾರು ಢಿಕ್ಕಿಯಾಗಿದೆ. ಪರಿಣಾಮ ಸ್ಕೂಟರ್ ಬಿದ್ದಿದ್ದು, ಬಾಲಕನು ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದನು. ಬಾಲಕನನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವಷ್ಟರಲ್ಲೇ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಲ್ ಅಹ್ಮದ್‌ರ ಅಂತ್ಯಸಂಸ್ಕಾರವು ಸೋಮವಾರ ಮಧ್ಯಾಹ್ನ1 ಗಂಟೆಗೆ ಮೂಡುಬಿದಿರೆಯ ಅಲಂಗಾರು ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





