ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಯಾವುದೇ ಶಕ್ತಿಯು ತಡೆಯಲು ಸಾಧ್ಯವಿಲ್ಲ: ರಾಜ್ ನಾಥ್

ಪಾಂಡು (ಜಾರ್ಖಂಡ್), ನ.24: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಈ ಭೂಮಿಯಲ್ಲಿನ ಯಾವುದೇ ಶಕ್ತಿಯು ಅಡ್ಡಿಯಾಗುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಘೋಷಿಸಿದ್ದಾರೆ. ರವಿವಾರ ಬಿಶ್ರಾಮಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಂಗ್, ಫ್ರಾನ್ಸ್‌ನಿಂದ ಖರೀದಿಸಲಾಗಿರುವ ರಫೇಲ್ ಯುದ್ಧ ವಿಮಾನಗಳು ಗಡಿಯಾಚೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಲಿವೆ ಎಂದೂ ಹೇಳಿದರು.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವನ್ನು ವಿಶ್ವದ ಯಾವುದೇ ಶಕ್ತಿಯು ತಡೆಯಲು ಸಾಧ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯವು ಮಂದಿರ ನಿರ್ಮಾಣಕ್ಕೆ ಮಾರ್ಗವನ್ನು ಸುಗಮಗೊಳಿಸಿದೆ ಎಂದು ‘ಜೈಶ್ರೀರಾಮ ’ಘೋಷಣೆಗಳ ನಡುವೆ ತಿಳಿಸಿದರು.
ಕಾಶ್ಮೀರದಲ್ಲಿ ವಿಧಿ 370 ರದ್ದತಿಯ ಕುರಿತು ಮಾತನಾಡಿದ ಸಿಂಗ್,ಒಂದು ದೇಶದಲ್ಲಿ ಎರಡು ಸಂವಿಧಾನಗಳು,ಇಬ್ಬರು ಪ್ರಧಾನಿಗಳು ಮತ್ತು ಎರಡು ಧ್ವಜಗಳು ಇರಲು ಸಾಧ್ಯವಿಲ್ಲ ಎಂದು ಭಾರತೀಯ ಜನಸಂಘದ ಸ್ಥಾಪಕ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರು 1952ರಲ್ಲಿಯೇ ಹೇಳಿದ್ದರು. ನಾವು ಅವರ ಕನಸನ್ನು ನನಸಾಗಿಸಿದ್ದೇವೆ ಮತ್ತು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಈಡೇರಿಸಿದ್ದೇವೆ ಎಂದರು.
ಜಾರ್ಖಂಡ್‌ನಲ್ಲಿ ಐದು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.