ಮುಸ್ಲಿಂ ಸಂಸ್ಕೃತ ಪ್ರೊಫೆಸರ್ ನೇಮಕಕ್ಕೆ ಬನಾರಸ್ ಹಿಂದು ವಿವಿ ಶಿಕ್ಷಕರ ವಿರೋಧ

ಹೊಸದಿಲ್ಲಿ, ನ.24: ಬನಾರಸ್ ಹಿಂದು ವಿವಿ(ಬಿಎಚ್‌ಯು)ಯಲ್ಲಿ ಸಂಸ್ಕೃತ ಪ್ರೊಫೆಸರ್ ಹುದ್ದೆಗೆ ಮುಸ್ಲಿಂ ಅಧ್ಯಾಪಕರನ್ನು ನೇಮಿಸಿರುವುದನ್ನು ವಿರೋಧಿಸಿ ವಿವಿಯ ಕೆಲವು ಶಿಕ್ಷಕರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಸಂಸ್ಕೃತ ವಿದ್ಯಾಧರ್ಮ ವಿಜ್ಞಾನ ವಿಭಾಗದ ಪ್ರೊಫೆಸರ್ ಆಗಿ ಫಿರೋಝ್ ಖಾನ್‌ರನ್ನು ನೇಮಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಬೆಂಬಲಿಸಿ ಈ ಪತ್ರವನ್ನು ಬರೆಯಲಾಗಿದ್ದು ನೇಮಕಾತಿಯನ್ನು ತಕ್ಷಣ ರದ್ದುಗೊಳಿಸುವಂತೆ ಕೋರಲಾಗಿದೆ. ಹಿಂದುಯೇತರ ವ್ಯಕ್ತಿಗಳನ್ನು ನೇಮಿಸಿರುವುದು ಸಂಸ್ಕೃತ ವಿದ್ಯಾಧರ್ಮ ವಿಜ್ಞಾನ ವಿಭಾಗದ ಸ್ಥಾಪಿತ ನೀತಿ ನಿಯಮ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಇದು ಆಚಾರ್ಯರು, ಶಾಸ್ತ್ರಿಗಳ ಪದವಿ ಪಡೆಯಲು ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ವಿಭಾಗದ ವಿದ್ಯಾರ್ಥಿಗಳು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಶಿಕ್ಷಕರಿಂದ ಪಾಠ ಹೇಳಿಸಿಕೊಳ್ಳಲು ಒತ್ತಾಯಪಡಿಸುವಂತಿಲ್ಲ. ಹೀಗೆ ಮಾಡಿದರೆ ಅಭೂತಪೂರ್ವ ಗೊಂದಲಕ್ಕೆ ಆಸ್ಪದ ನೀಡಿದಂತಾಗುತ್ತದೆ ಮತ್ತು ಆಚಾರ್ಯ ಪರಂಪರೆ ಬರಿದಾಗಲಿದೆ. ಹೀಗೆ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ವಿವಿಧ ಹಿಂದು ದೇವಾಲಯಗಳಲ್ಲಿ ಉದ್ಯೋಗಾವಕಾಶವೂ ಕೈತಪ್ಪಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಂಸ್ಕೃತ ವಿದ್ಯಾಧರ್ಮ ವಿಜ್ಞಾನ ವಿಭಾಗದ 50ಕ್ಕೂ ಅಧಿಕ ಹಾಲಿ ಮತ್ತು ನಿವೃತ್ತ ಶಿಕ್ಷಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ರೀತಿಯ ತುಷ್ಟೀಕರಣ ನೀತಿ ಮುಂದುವರಿಯುತ್ತಿರುವುದು ಅಸಂಬದ್ಧವಾಗಿದೆ. ವಿಭಾಗಕ್ಕೆ ಹಿಂದುಯೇತರ ಪ್ರೊಫೆಸರ್‌ಗಳನ್ನು ನೇಮಿಸಿದರೆ ಉನ್ನತ ಅಧ್ಯಯನಕ್ಕೆ ಇಲ್ಲಿಗೆ ಯಾರೂ ಬರಲಾರರು ಎಂದು ವಿವಿಯ ನಿವೃತ್ತ ಪ್ರೊಫೆಸರ್, 88 ವರ್ಷದ ರೇವಾಪ್ರಸಾದ್ ದ್ವಿವೇದಿ ಹೇಳಿದ್ದಾರೆ.