ನಿಮಗೆ ಕೋಪ ಬರುವುದಿಲ್ಲವೇ? ಹಾಗಾದರೆ....: ಮತದಾರರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದು ಹೀಗೆ

ಬೆಂಗಳೂರು, ನ.24: ಎಂಟಿಬಿ ನಾಗರಾಜ್ ಅವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಪಕ್ಷಕ್ಕೆ ಹೋಗಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕೆಂದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಪದ್ಮಾವತಿ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರವಿವಾರ ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಮತಯಾಚನೆ ವೇಳೆ ಮಾತನಾಡಿದ ಅವರು, ಎಂಟಿಬಿ ನಾಗರಾಜ್ ಎಂಬ ಹೆಸರು ಜನಗಳಿಗೆ ಗೊತ್ತಾಗಿದ್ದು ಕಾಂಗ್ರೆಸ್ ಪಕ್ಷದಿಂದ. ಕಾಂಗ್ರೆಸ್ ಪಕ್ಷದಿಂದ ಏನು ತೊಂದರೆ ಆಗಿತ್ತು. ಎಂಟಿಬಿ ನಾಗರಾಜ್‌ಗೆ 4 ಬಾರಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. 3 ಬಾರಿ ಶಾಸಕರಾಗಿ, ನಿಗಮ ಮಂಡಳಿ ಅಧ್ಯಕ್ಷರಾಗಿದ್ದರು ವಸತಿ ಸಚಿವರನ್ನಾಗಿಯೂ ಮಾಡಲಾಗಿತ್ತು. ಇದಕ್ಕಿಂತ ಇನ್ನೇನು ಕೊಡಬೇಕಿತ್ತು. ಬಿಜೆಪಿಯಲ್ಲಿ ಸಿಎಂ ಆಗಲು ಸಾಧ್ಯವಿದೆಯಾ, ಸಾಧ್ಯವಿಲ್ಲ. ಮತ್ತೆ ಯಾಕೆ ಬಿಜೆಪಿಗೆ ಹೋದ ಎಂಬುದನ್ನು ಮತದಾರರು ತಮ್ಮಲ್ಲಿಯೇ ಪ್ರಶ್ನೆ ಮಾಡಿಕೊಂಡು ಎಂಟಿಬಿಯನ್ನು ತಿರಸ್ಕರಿಸಬೇಕೆಂದು ಹೇಳಿದರು.
ಎಂಟಿಬಿ ಬೆನ್ನಿಗೆ ಚೂರಿ ಹಾಕುವ ಗಿರಾಕಿ. ಯಾಕಪ್ಪ ಪಕ್ಷ ಬಿಟ್ಟು ಹೋಗುತ್ತೀಯಾ ಎಂದು ಕೇಳಿದರೆ, ಸುಧಾಕರನನ್ನು ಕೇಳಬೇಕು ಎಂದು ಹೇಳುತ್ತಾನೆ. ಗೆಲ್ಲಿಸಿದ್ದು ನಾವು, ಮಂತ್ರಿ ಮಾಡಿದವರು ನಾವು. ಇಂತಹ ನೀಚ ರಾಜಕಾರಣ ಮಾಡುವವರನ್ನು ನಂಬಲು ಸಾಧ್ಯವಿದೆಯಾ. ರಾತ್ರಿ ಕಾಂಗ್ರೆಸ್ ಜೊತೆ ಇರುತ್ತೇನೆ ಎಂದವನು ಬೆಳಗ್ಗೆ ಅಶೋಕ್ ಜೊತೆಗೆ ಮುಂಬೈಗೆ ಹೊರಟು ಹೋದ. ಇಂತಹವರನ್ನು ಜನರು ನಂಬಬಾರದು ಎಂದು ಹೇಳಿದರು.
ಹೊಸಕೋಟೆ ಅಭಿವೃದ್ಧಿ ಕಾಂಗ್ರೆಸ್‌ನಿಂದ ಆಗಿದೆ. ಆದರೆ ನಾನು ಮಾಡಿದೆ ಎಂದು ಎಂಟಿಬಿ ಹೇಳಿಕೊಂಡು ತಿರುಗಾಡುತ್ತಾನೆ. ಆತ ಏನಾದರೂ ಸಿಎಂ ಅಥವಾ ಹಣಕಾಸು ಸಚಿವ ಆಗಿದ್ದನಾ ಎಂದು ಪ್ರಶ್ನಿಸಿದರು. ಒಂದು ಕಡೆ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೆನೆ ಎಂದು ಸುಳ್ಳು ಹೇಳುತ್ತಾರೆ. ಮತ್ತೊಂದು ಕಡೆ ಕ್ಷೇತ್ರದ ಅಭಿವೃದ್ಧಿ ಮಾಡಿದ್ದು ನಾನೇ, ನನಗೆ ಮತ ನೀಡಿ ಅಂತಾನೆ. ಜನರಿಗೆ ಭಾಗ್ಯಗಳ ಸರಮಾಲೆ ನೀಡಿದ ಕಾಂಗ್ರೆಸ್‌ಗೆ ಕೈ ಕೊಟ್ಟ ಎಂಟಿಬಿ ವಿರುದ್ಧ ನಿಮಗೆ ಕೋಪ ಬರುವುದಿಲ್ಲವೇ. ಕೋಪ ಬರುವುದಾದರೆ ಡಿ.5 ರಂದು ಅನರ್ಹನಿಗೆ ಬುದ್ಧಿ ಕಲಿಸಿ ಎಂದರು.
ನಾವು ಮಹಾನ್ ದೇಶಭಕ್ತರು ಎನ್ನುವ ಮೋದಿ, ಅಮಿತ್ ಶಾ ಅವರಿಬ್ಬರು ಹುಟ್ಟಿದ್ದು ಸ್ವತಂತ್ರ್ಯ ಬಂದ ಬಳಿಕ. ಸಮಾಜದಲ್ಲಿ ಜಾತಿ-ಧರ್ಮಗಳ ಮಧ್ಯೆ ಸಂಘರ್ಷ ತಂದು, ಅಧಿಕಾರ ಪಡೆಯುವುದು ಬಿಟ್ಟರೆ ಅವರ ಕೊಡುಗೆ ಏನು ಇಲ್ಲ. ಅಂತಹ ಪಕ್ಷಕ್ಕೆ ಸೇರಿರುವ ಎಂಟಿಬಿ ನಾಗರಾಜ್ ಕ್ಷೇತ್ರದ ಜನ, ಪಕ್ಷ, ನಾಯಕರಿಗೆ ದ್ರೋಹ ಮಾಡಿದ್ದಾರೆ. ಇಂಥವರಿಗೆ ನೀವು ಮತ ನೀಡಬಹುದಾ ಎಂದು ಪ್ರಶ್ನಿಸಿದರು.
ದೊಡ್ಡ ಮನುಷ್ಯ ಇರಬಹುದು, ಸಣ್ಣತನ ಹೋಗಿಲ್ಲ
ಶ್ರೀರಾಮನಿಗೆ ಆಂಜನೇಯ ಹೇಳಿದ್ದ ಎದೆ ಬಗೆದರೆ ರಾಮ ಅಂತ. ಡೋಂಗಿ ಎಂಟಿಬಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ ಎಂದ. ನಾನು ಹೇಳಿದನಾ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಅಂತಾ. ಈಗ ಹೇಳುತ್ತಾನೆ ಸಿದ್ದರಾಮಯ್ಯನಿಗೆ ನಾನೇ ಸಾಲ ಕೊಟ್ಟಿದ್ದಿನಿ ಎಂದು, ಅಧಿಕಾರಿ, ಆಸ್ತಿ ಸಂಪತ್ತು ಶಾಶ್ವತ ಅಲ್ಲ. ಕೆಲವೊಮ್ಮೆ ಸಾಲ ಪಡೆದುಕೊಳ್ಳಬೇಕು. ಎಲ್ಲರೂ ಎಂಟಿಬಿ ನಾಗರಾಜ್ ತರ ದುಡ್ಡು ಇರೋರಲ್ಲ. ಇವನು ದೊಡ್ಡ ಮನುಷ್ಯ ಇರಬಹುದು. ಆದರೆ ಇನ್ನೂ ಸಣ್ಣತನ ಹೋಗಿಲ್ಲ ಎಂದು ಎಂಟಿಬಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
-ಸಿದ್ದರಾಮಯ್ಯ, ವಿಪಕ್ಷ ನಾಯಕ







