ಇದು ನಾಚಿಕೆಗೇಡಿನ ರಾಜಕೀಯ: ಶಿವಸೇನೆ

ಮುಂಬೈ, ನ. 24: ತನ್ನ ಮಾಜಿ ಮಿತ್ರ ಪಕ್ಷ ಹಾಗೂ ಪ್ರತಿಸ್ಪರ್ಧಿ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಶಿವಸೇನೆ, ಮಹಾರಾಷ್ಟ್ರದ ರಾಜಕೀಯ ತಿರುವನ್ನು ‘ನಾಚಿಕೆಗೇಡಿನ ರಾಜಕೀಯ’ ಎಂದು ಕರೆದಿದೆ. ಶಿವಸೇನೆ ತನ್ನ ಮುಖವಾಣಿಯಾದ ಸಾಮ್ನಾದಲ್ಲಿ, ‘ಇದು ನಾಚಿಕೆಗೇಡಿನ ರಾಜಕೀಯ... ಶರದ್ ಪವಾರ್ ಗೆ ದ್ರೋಹ ಎಸಗಲಾಗಿದೆ’ ಎಂದು ಹೇಳಿದೆ.
ಶನಿವಾರ ಬೆಳಗ್ಗೆ ಮಹಾರಾಷ್ಟ್ರದಿಂದ ರಾಷ್ಟ್ರಪತಿ ಆಳ್ವಿಕೆ ಹಿಂದೆ ತೆಗೆದುಕೊಳ್ಳಲಾಗಿತ್ತು. ದೇವೇಂದ್ರ ಪಡ್ನವೀಸ್ ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಎನ್‌ಸಿಪಿ ತ್ಯಜಿಸಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರಿಂದ ಇದು ಸಾಧ್ಯವಾಗಿತ್ತು. ಈ ಮಹಾ ನಾಟಕ ಬಹಿರಂಗವಾಗುವುದಕ್ಕಿಂತ ಕೆಲವು ಗಂಟೆಗಳ ಮುನ್ನ ಶರದ್ ಪವಾರ್, ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಎಂದು ಪ್ರಕಟಿಸಿದ್ದರು.
ಬಿಜೆಪಿ ಸೇರಿದ ಅಜಿತ್ ಪವಾರ್ ಅವರನ್ನು ಎನ್‌ಸಿಪಿಯ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ವಜಾಗೊಳಿಸಲಾಗಿದೆ. ಅಜಿತ್ ಪವಾರ್ ಬಿಜೆಪಿ ಸೇರಿರುವುದು ಅವರ ಸ್ವಂತ ಆಯ್ಕೆಯೇ ಹೊರತು, ಪಕ್ಷದ ಆಯ್ಕೆ ಅಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ, ಅಜಿತ್ ಪವಾರ್ ಅವರ ರೆಕ್ಕೆಗಳನ್ನು ಕತ್ತರಿಸಲಾಗಿದೆ ಎಂದು ಹೇಳಿದೆ. ಅಲ್ಲದೆ ಈ ಎಲ್ಲ ಬೆಳವಣಿಗೆಯನ್ನು ಫರ್ಜಿಕಲ್ ಸ್ಟ್ರೈಕ್ ಎಂದು ಅದು ವ್ಯಂಗ್ಯವಾಡಿದೆ





