ಪಟ್ಲ ಅವರನ್ನು ಕಟೀಲು ಮೇಳಕ್ಕೆ ಸೇರ್ಪಡೆಗೊಳಿಸಲು ಒತ್ತಾಯ : ನ.25ರಂದು ಪ್ರತಿಭಟನೆ
ಮಂಗಳೂರು, ನ.24: ಕಟೀಲು ಮೇಳದಿಂದ ಕೈಬಿಟ್ಟ ಭಾಗವತ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರನ್ನು ಮತ್ತೆ ಕಟೀಲು ಮೇಳಕ್ಕೆ ಸೇರ್ಪಡೆಗೊಳಿಸಬೇಕು. ಸೇವೆಯಾಟದ ದಿನ ಮಾಡಿದ ಅವಮಾನಕ್ಕೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಪಟ್ಲ ಸತೀಶ್ ಶೆಟ್ಟಿ ಅವರ ಅಭಿಮಾನಿಗಳ ವತಿಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನೇತೃತ್ವದಲ್ಲಿ ನ.25ರಂದು ಮಧ್ಯಾಹ್ನ 2:30ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಆಯೋಜಿಸಲಾಗಿದೆ.
ಶನಿವಾರ ಸಂಜೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮತ್ತು ಪಟ್ಲ ಅಭಿಮಾನಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಖಂಡನೆ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಶುಕ್ರವಾರ ಕ್ಷೇತ್ರದ ಯಕ್ಷಗಾನ ಮೇಳಗಳ ತಿರುಗಾಟದ ಆರಂಭದ ಸೇವೆಯಾಟ ಸಂದರ್ಭದಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ರಂಗಸ್ಥಳದಲ್ಲಿ ಭಾಗವತಿಕೆಗೆ ಕುಳಿತಾಗ ಅವರಿಗೆ ಅವಕಾಶ ನೀಡದೆ ಕೆಳಗಿಳಿಸಿರುವುದು ಖಂಡನೀಯ ಎಂದು ಪಟ್ಲ ಸತೀಶ್ ಶೆಟ್ಟಿ ಅಭಿಮಾನಿಗಳ ಬಳಗ ಹೇಳಿದೆ.
‘ಶುಕ್ರವಾರ ಪುಣ್ಯಕ್ಷೇತ್ರವಾದ ಶ್ರೀ ಕಟೀಲು ಕ್ಷೇತ್ರದ ಯಕ್ಷಗಾನ ಮೇಳಗಳ ಆರಂಭದ ದಿನ ಸೇವೆ ಆಟದ ಸಂದರ್ಭದಲ್ಲಿ ಮೇಳದ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ರಂಗಸ್ಥಳದಿಂದ ಇಳಿಸಿದ ಆಡಳಿತದ ಕ್ರಮವನ್ನು ಸಭೆಯು ತೀವ್ರವಾಗಿ ಖಂಡಿಸುತ್ತದೆ. ಭಾಗವತರು ರಂಗವೇರಿದ ಮೇಲೆ ತನ್ನ ಕಲಾ ಕೈಂಕರ್ಯ ಮಾಡದಂತೆ ತಡೆಯುವುದು ಕಲೆಗೆ, ಕಲಾವಿದರಿಗೆ ಮತ್ತು ಮಹಾನ್ ಕ್ಷೇತ್ರಕ್ಕೆ ಅವಮಾನಕರ. ಈ ಕುರಿತಾಗಿ ಕಾನೂನು, ನ್ಯಾಯಗಳ ಚೌಕಟ್ಟಿನಲ್ಲಿ ಸರಕಾರಿ ಇಲಾಖೆ-ದೇವಾಲಯದ ಆಡಳಿತದ ಮತ್ತು ಕಲಾವಿದರ ಘನತೆಗೆ ತಕ್ಕಂತೆ ಸೂಕ್ತ ಸೌಹಾರ್ದಯುತ ಪರಿಹಾರವನ್ನು ರೂಪಿಸಿ ಭಾಗವತರನ್ನು ಮರಳಿ ಮೇಳಕ್ಕೆ ಸಂಯೋಜಿಸಿ ಆಗಿರುವ ತಪ್ಪನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ, ಶ್ರೀ ಕ್ಷೇತ್ರ ಕಟೀಲಿನಲ್ಲಿ ಶುಕ್ರವಾರ ನಡೆದಿರುವ ಘಟನೆ ಕಲಾವಿದ ರೆಲ್ಲರಿಗೂ ಅತೀವ ನೋವು ತಂದಿದೆ. ಇದು ಕಲಾವಿದರಿಗೆ, ಕಲಾಕ್ಷೇತ್ರಕ್ಕೆ ಮಾಡಿರುವ ಅವಮಾನ ಎಂದರು.
ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನ ರಂಗದಲ್ಲಿ ನನ್ನ 55 ವರ್ಷಗಳ ಅನುಭವದಲ್ಲಿ ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ರಂಗಸ್ಥಳದಲ್ಲಿ ಭಾಗವತಿಕೆಗೆ ಕುಳಿತ ಮೇಲೆ ಪಟ್ಲ ಅವರನ್ನು ಇಳಿಸಿರುವುದು ಕಲೆಗೆ ಮಾಡಿರುವ ಅವಮಾನವಾಗಿದ್ದು, ಇದು ಖಂಡನೀಯ ಎಂದರು.
ಕಲಾವಿದ ಸಂಜಯ ಕುಮಾರ್ ಗೋಣಿಬೀಡು ಮಾತನಾಡಿ, ಯಕ್ಷಗಾನ ಇತಿಹಾಸದಲ್ಲೇ ನಡೆಯದ ಘಟನೆ ಶುಕ್ರವಾರ ಕಟೀಲು ಕ್ಷೇತ್ರದ ಮೇಳದ ಸೇವೆಯಾಟದಲ್ಲಿ ನಡೆದಿದ್ದು, ಇದು ಸರಿಯಲ್ಲ. ಪಟ್ಲ ಸತೀಶ್ ಶೆಟ್ಟಿ ಅವರಿಗೆ ನ್ಯಾಯ ಸಿಗಬೇಕು ಹಾಗೂ ಪ್ರಕರಣ ಸುಖಾಂತ್ಯವಾಗಬೇಕು ಎಂದು ಒತ್ತಾಯಿಸಿದರು.
ಪ್ರಕರಣವನ್ನು ಖಂಡಿಸಿ ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿ, ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನ ಆಡಳಿತ ಮೊಕ್ತೇಸರ ಬೋಳಾರ ತಾರಾನಾಥ ಶೆಟ್ಟಿ, ತುಳು ನಾಟಕ ಕಲಾವಿದ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಆಳ್ವ, ಅರುವ ಕೊರಗಪ್ಪ ಶೆಟ್ಟಿ, ಸಾಂಸ್ಕೃತಿಕ ಪ್ರತಿಷ್ಠಾನದ ದೇವಿ ಪ್ರಸಾದ್ ಶೆಟ್ಟಿ, ಆರ್.ಕೆ. ಭಟ್, ಸಂಜಯರಾವ್, ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ, ಯಕ್ಷಗಾನ ವಿಮರ್ಶಕ ಶಾಂತಾರಾಮ ಕುಡ್ವ ಮುಂತಾದವರು ಮಾತನಾಡಿದರು.
ಪೂರ್ವನಿಯೋಜಿತ ಕೃತ್ಯ: ಭಾಗವತ ಪಟ್ಲ ಸತೀಶ್ ಶೆಟ್ಟಿ
‘ಮೇಳದ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದ ಏಳು ಕಲಾವಿದರನ್ನು ಮೇಳದ ಯಜಮಾನರು ಶ್ರೀ ಕ್ಷೇತ್ರಕ್ಕೆ ಕರೆಯಿಸಿ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ನನ್ನಲ್ಲಿ ಏನಾದರೂ ತಪ್ಪು ಆಗಿದ್ದರೆ ನನ್ನನ್ನೂ ಕರೆಯಿಸಿ ಕೇಳಬಹುದಿತ್ತು. ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರಲ್ಲಿ ಆಶೀರ್ವಾದ ಪಡೆದು ನಿಂತಿದ್ದೆ. ಆ ಸಂದರ್ಭವೂ ಯಾರೂ ಮಾಹಿತಿ ನೀಡಲಿಲ್ಲ. ಆದರೆ ರಂಗಸ್ಥಳ ಏರಿದ ಕೂಡಲೇ ಈ ರೀತಿ ಕೆಳಗಿಳಿಸಿದ್ದು ಪೂರ್ವನಿಯೋಜಿತ. ಯಾವ ಕಲಾವಿದರಿಗೂ ಇಂತಹ ಅಪಮಾನ ಆಗಬಾರದು’ ಎಂದು ಭಾಗವತ ಪಟ್ಲ ಸತೀಶ್ ಶೆಟ್ಟಿ ‘ನಾನು ನನ್ನ ಮೇಳದ ಪ್ರಧಾನ ಭಾಗವತರಿಗೆ ಶುಕ್ರವಾರ ಬೆಳಗ್ಗೆಯೇ ಸಂಪರ್ಕಿಸಿದ್ದೆ. ರಾತ್ರಿವರೆಗೂ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಮೇಳದ ಮ್ಯಾನೇಜರ್ ಕೂಡ ನನಗೆ ವಿಷಯ ತಿಳಿಸಿರಲಿಲ್ಲ. ವೇದಿಕೆಗೆ ಏರಿದ ಕೂಡಲೇ ದೇವಿಪ್ರಸಾದ್ ಶೆಟ್ಟಿ ಸಹಿತ ನಾಲ್ವರು ಗೂಂಡಾಗಳಂತೆ ಬಂದು ಭಾಗವತಿಕೆ ಮಾಡಬೇಡ ಎಂದು ಕೆಳಗಿಳಿಯಲು ಹೇಳಿದ್ದಾರೆ. ನಾನು ಇಳಿದಿದ್ದೇನೆ, ತಲೆಯ ಪೇಟವನ್ನು ತಾಯಿ ಕಟಿಲೇಶ್ವರಿಯ ಮುಂದಿರಿಸಿ ಕೈಮುಗಿದು ಬಂದಿದ್ದೇನೆ’ ಎಂದು ಭಾಗವತ ಪಟ್ಲ ಸತೀಶ್ ಶೆಟ್ಟಿ ಘಟನೆ ಬಗ್ಗೆ ವಿವರಿಸಿದರು.
‘ಮುಂದೇನು ಎನ್ನುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನಾನು ಯಾವತ್ತಿಗೂ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಮಗ. ನನಗೆ ಆದ ಅನ್ಯಾಯಕ್ಕೆ ಅಮ್ಮನವರೇ ನನ್ನನ್ನು ಕರೆಯಿಸಿಕೊಳ್ಳುವ ಭರವಸೆ ಇದೆ’ ಎಂದು ತಿಳಿಸಿದರು.
‘ರಂಗಸ್ಥಳದಲ್ಲೇ ನನ್ನನ್ನು ಕೆಳಗಿಳಿಸುವುದು ಅವರ ಉದ್ದೇಶವಾಗಿತ್ತು. ಸುಮಾರು 20 ವರ್ಷಗಳಿಂದ ನಾನು ಯಕ್ಷಗಾನ ಕಲಾಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ನನ್ನಿಂದ ಆದಷ್ಟು ಸಹಾಯ ಮಾಡಿದ್ದೇನೆ. ಮೇಳಕ್ಕೆ, ಯಜಮಾನರಿಗೆ, ಸೇವಾಕರ್ತರಿಗೆ ಎಂದೂ ದ್ರೋಹ ಮಾಡಿಲ್ಲ’ ಎಂದರು.







