ಮಂಡ್ಯದಲ್ಲಿ ಬಿಜೆಪಿ ಅರಳುವುದು ಕನಸಿನ ಮಾತು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ

ಮಂಡ್ಯ, ನ.24: ಎಷ್ಟೇ ಆಸೆ-ಆಮಿಷಗಳನ್ನು ಒಡ್ಡಿದರೂ ಮಂಡ್ಯದ ನೆಲದಲ್ಲಿ ಬಿಜೆಪಿ ಅರಳುವುದು ಕನಸಿನ ಮಾತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ.
ಕೆ.ಆರ್.ಪೇಟೆಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರೇ ಆಸ್ತಿಯಾಗಿದ್ದು, ಪಕ್ಷದ್ರೋಹಿ ಅನರ್ಹ ಶಾಸಕ ನಾರಾಯಣಗೌಡರಿಗೆ ಜನತಾ ನ್ಯಾಯಾಲಯದಲ್ಲಿ ತಕ್ಕ ಶಿಕ್ಷೆಯನ್ನು ನೀಡಲಿದ್ದಾರೆ ಎಂದರು.
ಕೃಷ್ಣರಾಜಪೇಟೆ ತಾಲೂಕಿನ ಪ್ರಬುದ್ಧ ಮತದಾರರು ಐತಿಹಾಸಿಕ ತೀರ್ಪನ್ನು ನೀಡಲಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬಿ.ಎಲ್.ದೇವರಾಜು ಅವರ ಗೆಲುವು ನಿಶ್ಚಿತ ಎಂದು ಅವರು ಭವಿಷ್ಯ ನುಡಿದರು.
ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ. ಕೆ.ಆರ್.ಪೇಟೆ ಕ್ಷೇತ್ರವು ಜೆಡಿಎಸ್ ಭದ್ರಕೋಟೆ ಎನ್ನುವುದು ಅಭ್ಯರ್ಥಿ ದೇವರಾಜು ಗೆಲುವಿನ ಮೂಲಕ ಸಾಬೀತಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನ.25ರಂದು ಕಸಬಾ ಹೋಬಳಿಯಲ್ಲಿ ನಿಖಿಲ್ ಕುಮಾರಸ್ವಾಮಿ, 28 ರಂದು ತಾಲೂಕಿನ ಎಲ್ಲ ಹೋಬಳಿಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತಯಾಚನೆ ಮಾಡುವರು. ಎಚ್.ಡಿ.ಕುಮಾರಸ್ವಾಮಿ ಡಿ.3ರಂದು ಕೆ.ಆರ್.ಪೇಟೆಯಲ್ಲಿ ಬಹಿರಂಗ ಸಭೆಯನ್ನು ಉದ್ಧೇಶಿಸಿ ಪ್ರಚಾರ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮಾತನಾಡಿ, ನಾನು ಏಕಾಂಗಿಯಲ್ಲ. ಜಿಲ್ಲೆಯ ಶಾಸಕರು ಹಾಗೂ ರಾಜ್ಯ ನಾಯಕರು ತಾಲೂಕಿನಲ್ಲಿ ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ. ನನ್ನ ಗೆಲುವು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾಧಿಕಾರಿ ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕೀರಾಂ, ಮನ್‍ಮುಲ್ ನಿರ್ದೇಶಕ ಎಚ್.ಟಿ.ಮಂಜು, ನೆಲ್ಲಿಗೆರೆ ಬಾಲು, ಮುಖಂಡರಾದ ಬಸ್ ಕೃಷ್ಣೇಗೌಡ, ಶಶಿಧರ ಸಂಗಾಪುರ, ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಮತ ಬಾಂಧವರು ಒಂದೇ ಒಂದು ಮತವನ್ನೂ ತಪ್ಪದೇ ಬಿಜೆಪಿ ಪಕ್ಷಕ್ಕೆ ಸಲ್ಲಿಸಿ, ಮೂರೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ದಕ್ಷ, ಸುಭದ್ರ ಸರಕಾರ ನಡೆಸಲು ಸಹಾಯ ಮಾಡಬೇಕು ಎಂದು ಮನವಿ ಮಾಡಿ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಲಿದೆ.’
-ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ







