ಸತ್ಕರ್ಮಗಳಿಗೆ ಜಾತಿ, ಧರ್ಮ, ಪಕ್ಷ ನೋಡದೆ ಕೈಜೋಡಿಸಿ-ನಯೀಮ್ ಫೈಝಿ
ಬಪ್ಪಳಿಗೆಯಲ್ಲಿ ಸಾಂತ್ವನ ಜಾಗೃತಿ ಸರಳ ವಿವಾಹ ಕಾರ್ಯಕ್ರಮ
![ಸತ್ಕರ್ಮಗಳಿಗೆ ಜಾತಿ, ಧರ್ಮ, ಪಕ್ಷ ನೋಡದೆ ಕೈಜೋಡಿಸಿ-ನಯೀಮ್ ಫೈಝಿ ಸತ್ಕರ್ಮಗಳಿಗೆ ಜಾತಿ, ಧರ್ಮ, ಪಕ್ಷ ನೋಡದೆ ಕೈಜೋಡಿಸಿ-ನಯೀಮ್ ಫೈಝಿ](https://www.varthabharati.in/sites/default/files/images/articles/2019/11/24/220773-1574615273.jpg)
ಪುತ್ತೂರು: ಸತ್ಕರ್ಮಗಳನ್ನು ಯಾರು ನಡೆಸಿದರೂ ಅವರಲ್ಲಿ ಜಾತಿ, ಧರ್ಮ, ಪಕ್ಷವನ್ನು ನೋಡದೆ ಅವರೊಂದಿಗೆ ಕೈಜೋಡಿಸ ಬೇಕು. ಸಮಾಜ ಒಡೆಯುವ ಜನರಿಗೆ ಸಹಕಾರ ನೀಡದೆ ಸಮಾಜ ಕಟ್ಟುವವವರ ಜೊತೆಗಿದ್ದು ಸಂಪೂರ್ಣ ಸಹಕಾರ ನೀಡಿ ಎಂದು ಬಪ್ಪಳಿಗೆ ಜುಮ್ಮಾ ಮಸೀದಿಯ ಖತೀಬ್ ಅಹ್ಮದ್ ನಯೀಮಿ ಫೈಝಿ ಹೇಳಿದರು.
ಅವರು ರವಿವಾರ ಇಹ್ಸಾನ್ ಫೌಂಡೇಶನ್ ಪುತ್ತೂರು ಇದರ ಆಶ್ರಯದಲ್ಲಿ ಬಪ್ಪಳಿಗೆ ಮಸೀದಿ ವಠಾರದಲ್ಲಿ ನಡೆದ `ಸಾಂತ್ವನ ಜಾಗೃತಿ-ಸರಳ ವಿವಾಹ' 3ನೇ ಆವೃತ್ತಿಯ ಕಾರ್ಯಕ್ರಮದಲ್ಲಿ 5 ಬಡ ಕುಟುಂಬದ ಜೋಡಿಗಳ ವಿವಾಹ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಿರತೆಯ ಕೊರತೆಯಿದೆ. ಸಮಾಜದೊಳಗಿನ ತಿಕ್ಕಾಟ ಹೆಚ್ಚಾಗುತ್ತಿದೆ. ಇದೆಲ್ಲವನ್ನು ತಡೆಯಲು ಸಾಮೂಹಿಕ ಸರಳ ವಿವಾಹದಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ. ಇಸ್ಲಾಂ ಧರ್ಮಗಳ ಬಗ್ಗೆ ಹರಡುವ ತಪ್ಪು ಸಂದೇಶಗಳನ್ನು ತಡೆಯಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ. ಇನ್ನೊಬ್ಬರ ನೋವಿಗೆ ಸ್ಪಂಧಿಸುವ, ಅವರ ಕಷ್ಟ ಸಂಕಷ್ಟಗಳಿಗೆ ಸಹಕರಿಸುವ ಮನೋಭಾವ ಉತ್ತಮ ವಿಚಾರವಾಗಿದೆ ಎಂದ ಅವರು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಲ್ಹಾಜ್ ಅಸಯ್ಯದ್ ಅಹಮದ್ ಪೂಕೋಯ ತಂಙಳ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ನಿಖಾಹ್ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರದ ಸದಸ್ಯ ಅಲ್ಹಾಜ್ ಶೈಖುನಾ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತೋಡಾರ್ ಸಂಶುಲ್ ಉಲಮಾ ಅರೆಬಿಕ್ ಕಾಲೇಜ್ನ ಮುದರ್ರಿಸ್ ಮುಫ್ತಿ ಅಬುಲ್ ಆರೀಫ್ ಮುಹಮ್ಮದ್ ಅಲಿ ಭಾಖವಿ ಖಾದ್ರಿ ಮತ್ತು ಟ್ಯಾಲೆಂಟ್ ಫೌಂಡೇಶನ್ನ ರಫೀಖ್ ಮಾಸ್ತರ್ ಸಭೆಯಲ್ಲಿ ಮಾತನಾಡಿದರು.
ತೋಡಾರು ಸಂಶುಲ್ ಉಲಮಾ ಅರೆಬಿಕ್ ಕಾಲೇಜ್ ಪ್ರಾಂಶುಪಾಲ ರಫೀಕ್ ಹುದವಿ ಕೋಲಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಬಪ್ಪಳಿಗೆ ಮಸ್ಚಿದುನ್ನೂರ್ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಹೆಚ್. ಮಹಮ್ಮದ್ ಹಾಜಿ, ಇಹ್ಸಾನ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಡಾ. ಸರ್ಫ್ರಾಜ್ ಮತ್ತಿತರರು ಉಪಸ್ಥಿತರಿದ್ದರು.
ಇಹ್ಸಾನ್ ಫೌಂಡೇಶನ್ ಖಜಾಂಜಿ ಝಾಕಿರ್ ಹನೀಫ್ ಸ್ವಾಗತಿಸಿದರು. ಖಾದರ್ ಕೂರ್ನಡ್ಕ ನಿರ್ವಹಿಸಿದರು.
![](https://www.varthabharati.in/sites/default/files/images/galllery/2019/11/24/24ptr-ihsaan 2.jpg)