‘ನಮ್ಮ ಓದುವ ಅಭ್ಯಾಸವನ್ನು ಗೂಗಲ್ ಹಾಳುಗೆಡಹಿದೆ’
ವಿದ್ಯಾರ್ಥಿನಿಯ ಪ್ರಶ್ನೆಗೆ ಪ್ರಧಾನಿಯ ಉತ್ತರ

ಹೊಸದಿಲ್ಲಿ, ನ. 24: ‘ಮನ್ ಕಿ ಬಾತ್’ನ 59ನೇ ಆವೃತ್ತಿಯ ಸಂದರ್ಭ ಶಾಲಾ ಮಕ್ಕಳೊಂದಿಗೆ ಸಂವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘‘ನಾನು ಪುಸ್ತಕಗಳನ್ನು ಓದುತ್ತಿದ್ದೆ. ಆದರೆ, ಪರಾಮರ್ಶೆಗೆ ಗೂಗಲ್ ಇರುವುದರಿಂದ ಓದುವ ಅಭ್ಯಾಸಕ್ಕೆ ತಡೆ ಉಂಟಾಯಿತು’’ ಎಂದರು.
ಕಾರ್ಯಕ್ರಮದ ಸಂದರ್ಭ ಹರ್ಯಾಣದ ರೋಹ್ಟಕ್‌ನ ವಿದ್ಯಾರ್ಥಿ ಅಖಿಲ್, ತುಂಬಾ ಬ್ಯುಸಿಯಾಗಿರುವ ನಿಮಗೆ ಟಿ.ವಿ, ಸಿನೆಮಾ ನೋಡಲು ಹಾಗೂ ಪುಸ್ತಕಗಳನ್ನು ಓದಲು ಸಮಯ ಸಿಗುತ್ತದೆಯೇ ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, ‘‘ನಾನು ಓದುವುದನ್ನು ಯಾವಾಗಲೂ ಇಷ್ಟಪಡುತ್ತೇನೆ. ಸಿನೆಮಾ ನೋಡಲು ಹಾಗೂ ದಿನನಿತ್ಯ ಟಿ.ವಿ. ನೋಡಲು ಎಂದಿಗೂ ಆಸಕ್ತಿ ಇಲ್ಲ. ಆದರೆ, ನಾನು ಈ ಹಿಂದೆ ಕೆಲವು ಬಾರಿ ಡಿಸ್ಕವರಿ ಚಾನೆಲ್ ನೋಡುತ್ತಿದ್ದೆ’’ ಎಂದರು. ‘‘ನಾನು ಪುಸ್ತಕಗಳನ್ನು ಓದುತ್ತಿದ್ದೆ. ಆದರೆ, ಇಂದಿನ ದಿನಗಳಲ್ಲಿ ನನಗೆ ಹೆಚ್ಚು ಪುಸ್ತಕಗಳನ್ನು ಓದಲು ಸಾಧ್ಯವಾಗುತ್ತಿಲ್ಲ. ಯಾವುದೇ ವಿಷಯವನ್ನು ಕೂಡಲೇ ಪರಾಮರ್ಶಿಸಲು ಗೂಗಲ್‌ನಲ್ಲಿ ಸಾಧ್ಯವಾಗುವುದರಿಂದ ನಮ್ಮ ಓದುವ ಅಭ್ಯಾಸವನ್ನು ಗೂಗಲ್ ಹಾಳುಗೆಡಹಿದೆ’’ ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಕೂಡ ಸಂವಹನ ನಡೆಸಿದರು ಹಾಗೂ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.





