120 ಕೋಟಿ ಜನರ ವೈಯಕ್ತಿಕ ಮಾಹಿತಿ ದಾಖಲೆ ಸೋರಿಕೆ ಪ್ರಕರಣ ಬೆಳಕಿಗೆ
ಹೊಸದಿಲ್ಲಿ, ನ.24: 120 ಕೋಟಿ ಜನರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಇಮೇಲ್ ಐಡಿ, ಉದ್ಯೋಗದಾತರ, ಸಾಮಾಜಿಕ ಮಾಧ್ಯಮಗಳ ವಿವರ, ಫೋನ್ ನಂಬರ್, ಹೆಸರು, ಉದ್ಯೋಗದ ವಿವರ ಹಾಗೂ ಭೌಗೋಳಿಕ ಸ್ಥಳದ ಮಾಹಿತಿ ಒಳಗೊಂಡಿದೆ ಎಂದು ವರದಿಯಾಗಿದೆ.
ಭದ್ರತಾ ಸಂಶೋಧಕರಾದ ವಿನಯ್ ಟ್ರೊಯ್ ಮತ್ತು ಬಾಬ್ ಡಯಚೆಂಕೊ ಈ ಮಾಹಿತಿ ನೀಡಿದ್ದಾರೆ. ಪೀಪಲ್ ಡೇಟಾ ಲ್ಯಾಬ್ಸ್ (ಪಿಡಿಎಲ್) ಎಂಬ ಹೆಸರಿನ ದತ್ತಾಂಶ ಅಭಿವೃದ್ಧಿ ಸಂಸ್ಥೆಯ ಮೂಲದ ಸರ್ವರ್‌ನಿಂದ ಈ ದತ್ತಾಂಶ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಈ ಅಸುರಕ್ಷಿತ ಸರ್ವರ್‌ನಲ್ಲಿ 622 ಅನನ್ಯ ಇಮೇಲ್ ವಿಳಾಸ ದಾಖಲಾಗಿತ್ತು ಎಂದು ತಿಳಿಸಲಾಗಿದೆ.
2109ರ ಅಕ್ಟೋಬರ್ 16ರಂದು ದತ್ತಾಂಶ ಸೋರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಓರ್ವ ಗ್ರಾಹಕ ದತ್ತಾಂಶ ಮೂಲವನ್ನು ಸುರಕ್ಷಿತವಾಗಿಡಲು ವಿಫಲನಾಗಿರುವುದು ಮಾಹಿತಿ ಸೋರಿಕೆಗೆ ಪ್ರಧಾನ ಕಾರಣವಾಗಿದೆ ಎಂದು ಇಮೇಲ್ ಸೂಚನೆಯಲ್ಲಿ ತಿಳಿಸಲಾಗಿದೆ. ಪಿಡಿಎಲ್ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ. ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಪಿಡಿಎಲ್ ಸಂಸ್ಥೆ 1.5 ಬಿಲಿಯನ್ ಜನರ ಮಾಹಿತಿಯನ್ನು ಸಂಗ್ರಹಿಸಿದ್ದು ಇದನ್ನು ಉತ್ಪನ್ನಗಳ ನಿರ್ಮಾಣ, ವೈಯಕ್ತಿಕ ಮಾಹಿತಿ ವರ್ಧನೆ ಮುಂತಾದ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ವರದಿಯಾಗಿದೆ.







