ಅಣ್ವಸ್ತ್ರಗಳಿಂದ ಜಗತ್ತಿನ ಭಯಾನಕ ವಾತಾವರಣ: ಪೋಪ್ ಫ್ರಾನ್ಸಿಸ್ ಕಳವಳ

ಹೊಸದಿಲ್ಲಿ, ನ.24: ಎರಡನೆ ವಿಶ್ವಮಹಾಯುದ್ಧದಲ್ಲಿ ಅಮೆರಿಕದ ಅಣುಬಾಂಬ್ ದಾಳಿಯಿಂದ ನಾಶಗೊಂಡ ಜಪಾನ್‌ನ ನಗರ ನಾಗಸಾಕಿಗೆ ರವಿವಾರ ಭೇಟಿ ನೀಡಿದ ಪೋಪ್ ಫ್ರಾನ್ಸಿಸ್ ಅವರು ಅಣ್ವಸ್ತ್ರಗಳು ಜಗತ್ತನ್ನು ಹೇಳಲು ಸಾಧ್ಯವಾಗದಂತಹ ಭಯಾನಕತೆಯೆಡೆಗೆ ತಳ್ಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 38 ವರ್ಷಗಳಲ್ಲೇ ಪೋಪ್ ಒಬ್ಬರು ಜಪಾನ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಸಲವಾಗಿದೆ. ನಾಗಸಾಕಿಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು ಅಣ್ವಸ್ತ್ರಗಳಿಲ್ಲದ ಜಗತ್ತನ್ನು ಕಾಣಲು ಸಾಧ್ಯವಿದೆ ಎಂದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಬೆದರಿಕೆಯಿಂದ ನಮ್ಮನ್ನು ರಕ್ಷಿಸಲು ಅಣ್ವಸ್ತ್ರಗಳಿಗೆ ಸಾಧ್ಯವಿಲ್ಲವೆಂಬುದನ್ನು ರಾಜಕೀಯ ನಾಯಕರು ಮರೆಯಕೂಡದೆಂದು ಅವರು ಹೇಳಿದ್ದಾರೆ.
“ನಾವು ಮಾನವರು ಒಬ್ಬರ ಮೇಲೆ ಇನ್ನೊಬ್ಬರು ಉಂಟು ಮಾಡಬಹುದಾದ ನೋವು ಹಾಗೂ ಭಯಾನಕತೆಯನ್ನು ಈ ಸ್ಥಳವು ನಮಗೆ ಮನವರಿಕೆ ಮಾಡಿಕೊಡುತ್ತದೆಯೆಂದು" ಅಣ್ವಸ್ತ್ರ ಬಾಂಬ್ ದಾಳಿಯ ಕೇಂದ್ರ ಬಿಂದುವಿನಲ್ಲಿ ನಿರ್ಮಿಸಲಾಗಿರುವ ಉದ್ಯಾನವನದಲ್ಲಿ ಮಳೆಯನ್ನು ಲೆಕ್ಕಿಸದೆ ನೆರೆದಿದ್ದ ಜನರನ್ನು ಉದ್ದೇಶಿಸಿ ಪೋಪ್ ಫ್ರಾನ್ಸಿಸ್ ತಿಳಿಸಿದರು.
ಸಭೆಗೆ ಮುನ್ನ ಫ್ರಾನ್ಸಿಸ್ ಅವರು ಅಣುಬಾಂಬ್ ದಾಳಿಗೆ ಬಲಿಯಾದ 74 ಸಾವಿರ ನಾಗರಿಕರ ನೆನಪಿಗಾಗಿ ಸ್ಥಾಪಿಸಲಾದ ಸ್ಮಾರಕಕ್ಕೆ ಪುಷ್ಪಗುಚ್ಚವನ್ನು ಇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.







