ಚಿತ್ರನಟ ರಮೇಶ್ ಭಟ್‍ಗೆ “ಸೂರಜ್ ಕಲಾಸಿರಿ" ಪ್ರಶಸ್ತಿ ಪ್ರದಾನ
ಸೂರಜ್ ಕಲಾಸಿರಿ -2019 ಸಮಾರೋಪ

ಕೊಣಾಜೆ: ಮುಡಿಪಿನ ಸೂರಜ್ ಸಮೂಹ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ "ಸೂರಜ್ ಕಲಾಸಿರಿ" -2019 ರ ಪ್ರಯುಕ್ತ ಭಾನುವಾರ ನಡೆದ ಸಮಾರೋಪದಲ್ಲಿ ಚಲನಚಿತ್ರ ನಟ ರಮೇಶ್ ಭಟ್ ಅವರಿಗೆ"ಸೂರಜ್ ಕಲಾಸಿರಿ" ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಬಳಿಕ ಮಾತನಾಡಿದ ರಮೇಶ್ ಭಟ್ ಅವರು, ಖ್ಯಾತ ಕಲಾವಿದ ಮೇಕಪ್ ನಾಣಿ ಅಭಿಪ್ರಾಯಪಟ್ಟಂತೆ ಮನೆಯಲ್ಲಿ ಬೈತಾರೆ, ಅವಮಾನ ಮಾಡ್ತಾರೆ, ಆ ಮೇಲೆ ಬಿಡದೆ ಇದ್ದರೆ ಅನುಮಾನ ಪಡ್ತಾರೆ ದಂಡ ಎಂದು, ಶ್ರದ್ಧೆಯಿಂದ ಮಾಡ್ತಾ ಇದ್ರೆ ಸನ್ಮಾನ ಮಾಡುವ ಯೋಗ ಬರುತ್ತದೆ ಎಂದಿದ್ದ ಮಾತು ನನ್ನ ಜೀವನದಲ್ಲಿ ಎಲ್ಲವೂ ನಡೆದಿದೆ ಎಂದು ಹೇಳಿದರು.
ಒಬ್ಬ ಓಟಗಾರ ಅಭ್ಯಾಸದ ದಿನಗಳಲ್ಲಿ 30ಸೆಕೆಂಡ್‍ನಲ್ಲಿ ದಿನದಲ್ಲಿ 100ಮೀ. ಕ್ರಮಿಸಿದರೆ ಮುಂದಿನ ದಿನಗಳಲ್ಲಿ 25ಸೆಕೆಂಡ್‍ನಲ್ಲಿ ಕ್ರಮಿಸಲು ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ತಾನೆ. ಹಾಗಾಗಿ ಯಾವುದೇ ಉದ್ದೇಶಿತ ಗುರಿಯನ್ನು ಸಾಧಿಸಲು ಬಾಲ್ಯದಿಂದಲೇ ಛಲ ಹುಟ್ಟುವಂತೆ ಪ್ರೋತ್ಸಾಹ ಕೊಟ್ಟರೆ ಮುಂದಿನ ದಿನಗಳಲ್ಲಿ ಖಂಡಿತವಾಗಿ ಸೆಲೆಬ್ರೆಟಿ ಆಗುವುದರಲ್ಲಿ ಸಂಶಯವಿಲ್ಲ ಎಂದರು.
ಭಾಜಪಾ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಮತನಾಡಿ ಉದ್ಯಮಿಯಾಗಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೇವಣ್ಕರ್ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ನುಡಿದರು. ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಣೇಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜುಬೇರ್, ಸಂಚಾಲಕಿ ಹೇಮಲತಾ ಎಂ. ರೇವಣ್ಕರ್, ಸೂರಜ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸೂರಜ್ ಎಂ. ರೇವಣ್ಕರ್, ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಮುಖೇಶ್ ಕುಮಾರ್ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಲ್ವಿಯಾ ಲೀನಾ ಅಮನ್ ಉಪಸ್ಥಿತರಿದ್ದರು.
ಸೂರಜ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಮಂಜುನಾಥ್ ಎಸ್. ರೇವಣ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು.







