ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರ ಸ್ವಾಭಿಮಾನದ ನಡಿಗೆ ಹಾಗೂ ಕರ್ನಾಟಕ ಕ್ರೀರ್ ಹಬ್ಬ-2019

ಬೆಂಗಳೂರು, ನ.24: ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಎಲ್ಲರಂತೆ ಸಮಾನವಾಗಿ ಕಾಣುವುದು ಹಾಗೂ ಸಮಾನ ಅವಕಾಶ ನೀಡುವುದು ಸರಕಾರದ ಕರ್ತವ್ಯ ಎಂದು ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಸಂಚಾಲಕ ಮಲ್ಲಪ್ಪ ತಿಳಿಸಿದ್ದಾರೆ.
ರವಿವಾರ ನಮ್ಮ ಪ್ರೈಡ್ ವತಿಯಿಂದ ನಗರದ ತುಳಸಿ ಪಾರ್ಕ್‌ನಿಂದ ಪುರಭವನದ ವರೆಗೆ ಆಯೋಜಿಸಿದ್ದ ಲೈಂಗಿಕ ಅಲ್ಪಸಂಖ್ಯಾತರ ಸ್ವಾಭಿಮಾನದ ನಡಿಗೆ ಹಾಗೂ ಕರ್ನಾಟಕ ಕ್ರೀರ್ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಆಧುನಿಕತೆ, ತಂತ್ರಜ್ಞಾನ ಸಾಕಷ್ಟು ಮುಂದುವರೆದರು ಲೈಂಗಿಕ ಅಲ್ಪಸಂಖ್ಯಾತರನ್ನು ಪೂರ್ವಾಗ್ರಹದಿಂದ ನೋಡುವುದು ತಪ್ಪಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ವಿಶೇಷವಾಗಿ ಪರಿಗಣಿಸಬೇಕೆಂದು ನಾವು ಹೇಳುತ್ತಿಲ್ಲ. ಎಲ್ಲರಂತೆ ನಮಗೂ ಸ್ವಾಭಿಮಾನದಿಂದ ಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕು. ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಅಲ್ಪಸಂಖ್ಯಾತರು ತೊಡಗುವಂತಾಗಲು ಮುಕ್ತ ಅವಕಾಶ ಒದಗಿಸಲು ಸರಕಾರ ಮುಂದಾಗಬೇಕೆಂದು ಅವರು ಹೇಳಿದರು.
ಕೇಂದ್ರ ಸರಕಾರ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸಂಘ, ಸಂಸ್ಥೆಗಳೊಂದಿಗೆ ಯಾವುದೇ ಚರ್ಚೆ ಮಾಡದೆ, ಲೈಂಗಿಕ ಅಲ್ಪಸಂಖ್ಯಾತ ಸಂರಕ್ಷಣಾ ಮಸೂದೆ-2019ನ್ನು ಸಂಸತ್‌ನಲ್ಲಿ ಮಂಡಿಸಲು ಮುಂದಾಗಿದೆ. ಯಾವುದೇ ಕಾರಣಕ್ಕೂ ಲೈಂಗಿಕ ಅಲ್ಪಸಂಖ್ಯಾತರ ಮಸೂದೆ ಮಂಡನೆ ಆಗಬಾರದು. ಪ್ರತಿಪಕ್ಷಗಳು ಇದಕ್ಕೆ ಅವಕಾಶ ಮಾಡಿಕೊಡಬಾರದೆಂದು ಅವರು ಒತ್ತಾಯಿಸಿದರು.
ಕರ್ನಾಟಕ ಕ್ರೀರ್ ಹಬ್ಬಕ್ಕೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಭಾಗಗಳಿಂದ ನೂರಾರು ಮಂದಿ ಲೈಂಗಿಕ ಅಲ್ಪಸಂಖ್ಯಾತರು ಭಾಗವಹಿಸಿದರು. ಈ ವೇಳೆ ಸಂಸ ರಂಗಮಂದಿರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು, ಕುಣಿತ, ನಾಟಕಗಳ ಮೂಲಕ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳನ್ನು ಸಾದರ ಪಡಿಸಿದರು.
ಹಕ್ಕೋತ್ತಾಯಗಳು: ರಾಜ್ಯ ಹಾಗೂ ಕೇಂದ್ರ ಸರಕಾರ 2018ರ ನವತೇಜ್ ಸಿಂಗ್ ಜೋಹರ್, ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಟಾನಗೊಳಿಸಬೇಕು. ಹಾಗೂ ಲಿಂಗತ್ವ ಮತ್ತು ಲೈಂಗಿಕತೆ ಬಗ್ಗೆ ಸಂವೇದನಾ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು. ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಹಿಂಸೆ, ತಾರತಮ್ಯ, ಕೌಟುಂಬಿಕ ದೌರ್ಜನ್ಯಗಳು ನಿಲ್ಲಿಸುವಂತೆ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಾಗರಿಕ ಒಕ್ಕೂಟದ ಹಕ್ಕು ಅಥವಾ ವಿವಾಹ, ದತ್ತು ಪಡೆಯುವ, ವಿಮೆ ಮತ್ತು ಪಿತ್ರಾರ್ಜಿತದ ಹಕ್ಕುಗಳು ಸಿಗಬೇಕು. ಲೈಂಗಿಕ ಅಲ್ಪಸಂಖ್ಯಾತರು ಎಲ್ಲ ಕ್ಷೇತ್ರಗಳಲ್ಲೂ ಮುಂದುವರೆಯುವಂತೆ ಪ್ರೋತ್ಸಾಹ ನೀಡಬೇಕು.







