ಎನ್‌ಸಿಪಿ-ಕಾಂಗ್ರೆಸ್ – ಶಿವ ಸೇನಾ ಶಾಸಕರು ಸುಪ್ರೀಂಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆ

ಮುಂಬೈ, ನ.25: ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಶಾಸಕರು ತಮ್ಮ ಸಂಖ್ಯಾ ಬಲದ ಬಗ್ಗೆ ಸುಪ್ರೀಂ ಕೋರ್ಟ್ ಗೆ ವಿಚಾರಣೆಗೂ ಮುನ್ನ ಅಫಿಡವಿಟ್ ಸಲ್ಲಿಸುವ ಸಾಧ್ಯತೆ ಇದೆ.
ಇದೇ ವೇಳೆ ಜಂಟಿ ಪತ್ರವನ್ನು ರಾಜ್ಯಪಾಲರಿಗೂ ಸಲ್ಲಿಸುವ ಸಾಧ್ಯತೆಯಿದೆ. ಶಿವಸೇನೆ ಮುಖಂಡ ಏಕ್ನಾಥ್ ಶಿಂಡೆ, ಜಯಂತ್ ಪಾಟೀಲ್ ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಬಾಸಾಹೇಬ್ ಥೋರತ್ ಅವರು ಜಂಟಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಎನ್‌ಸಿಪಿ-ಕಾಂಗ್ರೆಸ್ – ಶಿವ ಸೇನಾ ಮೈತ್ರಿಕೂಟ 154 ಶಾಸಕರ ಬೆಂಬಲ ಇದೆ ಎಂದು ಹೇಳುತ್ತಿದೆ. ಬಹುಮತಕ್ಕೆ 145 ಶಾಸಕರ ಬೆಂಬಲ ಅಗತ್ಯ. ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚನೆಯ ವಿರುದ್ಧ ಶಿವಸೇನೆಯ 56 ಶಾಸಕರು, ಕಾಂಗ್ರೆಸ್ 44, ಎನ್ ಸಿಪಿ 46 ಮತ್ತು 8 ಪಕ್ಷೇತರ ಶಾಸಕರು ಸಹಿ ಮಾಡಿರುವ ಅಫಿಡವಿಟ್ ನ್ನು ಸುಪ್ರಿಂ ಕೋರ್ಟ್ ಗೆ ಸಲ್ಲಿಸಲಿದ್ದಾರೆ.
ಬಹಮತ ಇಲ್ಲದಿದ್ದರೂ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯ ಮಂತ್ರಿಯಾಗಿದ್ದಾರೆ. ಅವರಿಗೆ ಬಹುಮತ ಇಲ್ಲ ಎಂಬ ವಿಚಾರವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಅಗತ್ಯದ ದಾಖಲೆಪತ್ರಗಳನ್ನು ಸೋಮವಾರ ಸಲ್ಲಿಸಲಿರುವುದಾಗಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯ ಮಂತ್ರಿ ಪೃಥ್ವಿರಾಜ್ ಚವಾಣ್ ತಿಳಿಸಿದ್ದಾರೆ.