ಏಷ್ಯಾದ ಬೆಳೆಯುತ್ತಿರುವ ಆರ್ಥಿಕತೆಗಳ ಪೈಕಿ ಕುಸಿಯುತ್ತಿರುವ ಏಕೈಕ ಕರೆನ್ಸಿ 'ರೂಪಾಯಿ'
ಭವಿಷ್ಯ ಆತಂಕದಲ್ಲಿ
ಹೊಸದಿಲ್ಲಿ: ಈ ತ್ರೈಮಾಸಿಕದಲ್ಲಿ ಶೇ. 5ರಷ್ಟು ಕುಸಿತ ಕಂಡ ರೂಪಾಯಿ ಮೌಲ್ಯ ದೇಶದ ಆರ್ಥಿಕ ಹಿಂಜರಿತದಿಂದ ಇನ್ನಷ್ಟು ಕುಸಿಯುವ ಭೀತಿ ಎದುರಿಸುತ್ತಿದೆ. ಏಷ್ಯಾದ ಬೆಳೆಯುತ್ತಿರುವ ಆರ್ಥಿಕತೆಗಳ ಪೈಕಿ ಕರೆನ್ಸಿ ದರ ಕುಸಿಯುತ್ತಿರುವ ಏಕೈಕ ದೇಶ ಭಾರತವಾಗಿದೆ.
ದೇಶದ ಅಭಿವೃದ್ಧಿ ಪ್ರಮಾಣ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದೂ ಇದಕ್ಕೆ ಕಾರಣವಾಗಿದೆ. ಏರುತ್ತಿರುವ ಸಾಲದ ಪ್ರಮಾಣ ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿನ ಆರ್ಥಿಕ ಸಮಸ್ಯೆ ಕೂಡ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಈ ತಿಂಗಳು 72.2425ಗೆ ಕುಸಿದಿತ್ತಲ್ಲದೆ ಇದು ಸೆಪ್ಟೆಂಬರ್ ತಿಂಗಳಲ್ಲಿ ದಾಖಲಾದ ಒಂಬತ್ತು ತಿಂಗಳ ಕನಿಷ್ಠ ದರವಾದ 72.4075ಗಿಂತ ಸ್ವಲ್ಪವೇ ಹೆಚ್ಚು ಆಗಿದೆ.
ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸಸ್ ಇತ್ತೀಚೆಗಷ್ಟೇ ಭಾರತದ ಕ್ರೆಡಿಟ್ ರೇಟಿಂಗ್ 'ನಕಾರಾತ್ಮಕ' ಎಂದು ವರದಿ ಮಾಡಿತ್ತಲ್ಲದೆ, ಆರ್ಥಿಕ ಹಿಂಜರಿತ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಾಲ ಮುಂದುವರಿದಿದೆ ಎಂದು ಹೇಳಿತ್ತು.