ಕಲಾವಿದರಿಗೆ ಅವಮಾನ, ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧ: ಪಟ್ಲ ಸತೀಶ್ ಶೆಟ್ಟಿ
ಮಂಗಳೂರು, ನ.25: ಕಟೀಲು ಮೇಳದ ಪ್ರಥಮ ಸೇವೆಯಾಟದ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ನನ್ನನು ಹಿಮ್ಮೆಳನದ ವೇದಿಕೆಯಿಂದ ಕೆಳಗಿಸುವ ಮೂಲಕ ಕಲಾವಿದನಿಗೆ ಅಪಚಾರ ವೆಸಗಿದ್ದಾರೆ. ಈ ರೀತಿಯ ಅವಮಾನ ಯಾವ ಕಲಾವಿದರಿಗೂ ಇನ್ನು ಮುಂದೆ ಆಗಬಾರದು. ಈ ಪ್ರಕರಣಕ್ಕೆ ನಾನು ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧನಾಗಿರುವುದಾಗಿ ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದ್ದಾರೆ.
ಕಟೀಲು ಯಕ್ಷಗಾನ ಮೇಳದಲ್ಲಿ ಕಳೆದ 19ವರ್ಷ ತಿರುಗಾಟ ಮಾಡಿದ್ದೇನೆ. ಮೇಳದ ನಿಯಮ ಉಲ್ಲಂಘಿಸಿಲ್ಲ. ಕಲೆಗೆ ಅಪಚಾರ ಮಾಡಿಲ್ಲ. ಆದರೆ ಇದೀಗ ಕಟೀಲು ಮೇಳದ ಆಡಳಿತ ಮಂಡಳಿಯವರು ಮಾಡಿರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿದೆ. ಆಧಾರ ರಹಿತವಾಗಿದೆ. ಈ ಬಗ್ಗೆ ಯಾವ ಕ್ಷೇತ್ರದಲ್ಲಿಯೂ ಪ್ರಮಾಣ ಮಾಡಲು ತಾನು ಸಿದ್ಧನಾಗಿರುವುದಾಗಿ ಪಟ್ಲ ಸತೀಶ್ ತಿಳಿಸಿದ್ದಾರೆ.
ಮೇಳದ ಕಲಾವಿದರಿಗೆ ತೊಂದರೆಯಾದಾಗ ನಾನು ಅವರ ಪರ ನಿಂತಿದ್ದೇನೆ. ಅವರಿಗೆ ನೆರವು ನೀಡಿದ್ದೇನೆ. ಕೆಲವರನ್ನು ಮೇಳಕ್ಕೆ ಮತ್ತೆ ಸೇರಿಸಬೇಕು ಎಂದು ಮನವಿ ಮಾಡಿದ್ದೇನೆ. ಆದರೆ ನನ್ನ ಮನವಿಗೆ ಯವೂದೇ ಸ್ಪಂದನೆ ದೊರೆಯಲಿಲ್ಲ. ನನ್ನನ್ನು ಮೇಳದಿಂದ ಕೈ ಬಿಡಲಾಗಿದೆ ಎಂದು ನಾನು ರಂಗಸ್ಥಳದ ವೇದಿಕೆ ಮೇಲೇರಿದ ಮೇಲೆ ತಿಳಿಸಿ ನನ್ನನು ಕೆಳಗಿಳಿಸಿರುವುದು ಕಲೆಗೆ ಮತ್ತು ಕಲಾವಿದರಿಗೆ ಮಾಡಿರುವ ಅವಮಾನ ಎಂದು ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಪೂಜ್ಯ ಹರಿನಾರಾಯಣ ಅಸ್ರಣ್ಣನವರು ಮಾಡಿರುವ ಆರೋಪ ನಿರಾಧಾರವಾದುದು. ನಾನು ಶ್ರೀ ಕ್ಷೇತ್ರ ಕಟೀಲಿನ ಭಕ್ತ, ಯಕ್ಷಗಾನ ಕಲೆಯನ್ನು ಆ ತಾಯಿಯ ಸೇವೆ ಎಂದು ಪೂಜ್ಯ ಭಾವನೆಯಿಂದ ಮಾಡುತ್ತಿದ್ದೇನೆ. ಆದರೆ ಕಲಾವಿದರನ್ನು ನಡೆಸಿ ಕೊಳ್ಳುತ್ತಿರುವ ರೀತಿ ಸರಿ ಇಲ್ಲ. ಈ ಬಗ್ಗೆ ನಾನು ಸಂಬಂಧ ಪಟ್ಟವರಿಗೆ ದೂರು ನೀಡಿದ್ದೇನೆ ಎಂದು ಸತೀಶ್ ಶೆಟ್ಟಿ ತಿಳಿಸಿದ್ದಾರೆ.