‘ಅನರ್ಹರಿಗಾಗಿ ಪ್ರಾಣ ತ್ಯಾಗ’ ಎಂದ ಬಿಎಸ್‌ವೈಗೆ ಕುಮಾರಸ್ವಾಮಿ ತಿರುಗೇಟು

ಹೊಸಪೇಟೆ, ನ. 25: ‘ಅನರ್ಹ ಶಾಸಕರಿಗಾಗಿ ಪ್ರಾಣ ತ್ಯಾಗ ಮಾಡುವೆ’ ಎಂದ ಮುಖ್ಯಮಂತ್ರಿ ಯಡಿಯೂರಪ್ಪ, ನೆರೆ ಸಂತ್ರಸ್ತರಿಗೆ ಅಥವಾ ರಾಜ್ಯದ ಆರೂವರೆ ಕೋಟಿ ಜನರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಹೇಳಲಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಸೋಮವಾರ ಇಲ್ಲಿನ ವಿಜಯನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಎಂ.ನಬಿ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗಾಗಿ ಪ್ರಾಣ ತ್ಯಾಗದ ಮಾತುಗಳನ್ನು ಆಡಿದ್ದರೆ, ಅವರಿಗೆ ದೀರ್ಘದಂಡ ನಮಸ್ಕಾರ ಮಾಡುತ್ತಿದ್ದೆ ಎಂದು ಹೇಳಿದರು.
ಸಮುದಾಯದ ದುರ್ಬಳಕೆ: ‘ವೀರಶೈವ ಸಮುದಾಯ ಬೇರೆಯವರಿಗೆ ಮತ ಹಾಕಬಾರದು’ ಎಂಬ ಯಡಿಯೂರಪ್ಪ ಹೇಳಿಕೆಗೆ ಆಕ್ಷೇಪಿಸಿದ ಕುಮಾರಸ್ವಾಮಿ, ವೀರಶೈವರನ್ನು ಬಿಟ್ಟು ಬೇರೆ ಯಾರ ಮತಗಳೂ ಬೇಡ ಎನ್ನುವ ಮೂಲಕ ಅವರು ಆ ಸಮುದಾಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇತರೆ ಸಮುದಾಯದವರನ್ನೂ ಅವಮಾನಿಸಿದ್ದಾರೆಂದು ದೂರಿದರು.
ಬೆನ್ನಿಗೆ ಚೂರಿ ಹಾಕಿದ: ‘ಕುಮಾರಣ್ಣ ನಿನ್ನಿಂದ ನಾನು ಬದುಕಿದೆ ಎನ್ನುತ್ತಿದ್ದ ಆನಂದ್ ಸಿಂಗ್ ಬಿಜೆಪಿ ಸೇರಿ ನನ್ನ ಬೆನ್ನಿಗೆ ಚೂರಿ ಹಾಕಿದರು. ನಾನು ತಿನ್ನುವ ಅನ್ನದ ಪ್ರತಿ ಅನ್ನದ ಅಗುಳಿನ ಮೇಲೂ ಕುಮಾರಸ್ವಾಮಿ ಹೆಸರಿದೆ ಎನ್ನುತ್ತಿದ್ದರು. ಆದರೆ, ನನ್ನಿಂದ ಸಹಾಯ ಪಡೆದು ಬಿಜೆಪಿಗೆ ಹೋದರು’ ಎಂದು ಆನಂದ್ ಸಿಂಗ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು.
ಆನಂದ್ ಸಿಂಗ್ ಮತದಾರರಿಗೆ ನೀಡುವ ಹಣ ಬೆವರು ಹರಿಸಿ ದುಡಿದಿದ್ದಲ್ಲ. ಜಿಲ್ಲೆಯ ಸಂಪತ್ತನ್ನು ಮಾರಾಟ ಮಾಡಿ ಗಳಿಸಿದ ಹಣ. ಹೀಗಾಗಿ ಮತದಾರರು ಎಚ್ಚರಿಕೆಯಿಂದ ಮತದಾನ ಮಾಡಬೇಕೆಂದ ಅವರು, 2008ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಮತ್ತೆ ಗೆದ್ದರು. 2018ರಲ್ಲಿ ಕಾಂಗ್ರೆಸ್ ಸೇರಿ ಮತ್ತೆ ಗೆದ್ದು ರಾಜೀನಾಮೆ ನೀಡುವ ಬದಲು ಬಿಜೆಪಿಯಲ್ಲೇ ಉಳಿಯಬೇಕಿತ್ತು ಎಂದರು.
ಪಕ್ಷಾಂತರದಿಂದ ನಡೆಯುತ್ತಿರುವ ಉಪಚುನಾವಣೆಗೆ ಸರಕಾರದ ಸುಮಾರು 35 ಕೋಟಿ ರೂ.ಖರ್ಚಾಗುತ್ತದೆ. ಅದು ಜನರ ತೆರಿಗೆ ಹಣ. 50ಕೋಟಿ ರೂ.ಸಂಗ್ರಹಿಸಿ ಯಡಿಯೂರಪ್ಪ ಉಪಚುನಾವಣೆ ಗೆಲ್ಲಲು ಹೊರಟಿದ್ದಾರೆ. ಅವರನ್ನು ಸೋಲಿಸಿದರೆ ಮಾತ್ರ ಜನರ ಬದುಕು ಸುಭಿಕ್ಷವಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಹದಿನಾಲ್ಕು ತಿಂಗಳು ಕಾಂಗ್ರೆಸ್ ಜೊತೆ ಮೈತ್ರಿ ಸರಕಾರ ನಡೆಸಲು ಹಲವು ಸಮಸ್ಯೆಗಳನ್ನು ಎದುರಿಸಿದೆ. ರೈತರ ಸಾಲಮನ್ನಾ ನನ್ನ ಉದ್ದೇಶವಾಗಿತ್ತು. 25 ಸಾವಿರ ಕೋಟಿ ರೂ.ಸಾಲಮನ್ನಾ ಮಾಡಲಾಗಿದೆ. 26 ಲಕ್ಷ ಮಂದಿಗೆ ಅನುಕೂಲವಾಗಿದೆ. ಆದರೆ ಮತ ಹಾಕಬೇಕಾದರೆ ಏಕೆ ನಮ್ಮನ್ನು ಮರೀತೀರಿ? ಎಂದು ಎಚ್‌ಡಿಕೆ ಪ್ರಶ್ನಿಸಿದರು.
ಪ್ರಧಾನಿ ಮೋದಿ ಆಗಾಗ ಅತಿಥಿಯಂತೆ ದೇಶಕ್ಕೆ ಬಂದು ಹೋಗುತ್ತಾರೆ. ಉಳಿದ ಸಮಯದಲ್ಲಿ ವಿದೇಶ ಪ್ರವಾಸ ಮಾಡುತ್ತಿರುತ್ತಾರೆ. ಆದರೆ, ರಾಜ್ಯದಲ್ಲಿ ನೆರೆ ಹಾವಳಿ ಉಂಟಾದ ಸಂದರ್ಭದಲ್ಲಿ ಒಮ್ಮೆಯೂ ಭೇಟಿ ನೀಡಲಿಲ್ಲ. ಭರವಸೆಯ ಮಾತನ್ನೂ ಆಡಲಿಲ್ಲ. ರಾಜ್ಯದಲ್ಲಿ ಸರಕಾರ ಅನರ್ಹರ ಪರವಾಗಿದೆ ಎಂದು ಟೀಕಿಸಿದರು.
‘ಜನಗಳನ್ನು ಖರೀದಿಸುತ್ತೇವೆ ಎಂಬ ಅಹಂಕಾರವನ್ನು ಬಿಜೆಪಿ ಪ್ರದರ್ಶಿಸಿದೆ. ನೆರೆ ಸಂತ್ರಸ್ತರಿಗೆ ನೆರವೂ ನೀಡಲಿಲ್ಲ. ನಾನು ಬಿಜೆಪಿ ಅಥವಾ ಕಾಂಗ್ರೆಸ್ ಜೊತೆಗೆ ಏಕೆ ಹೋಗಲಿ. ಆದರೆ, ಸರಕಾರವಂತೂ ಉಳಿಯಲಿದೆ. ಅದಕ್ಕೆ ಏನು ಮಾಡುತ್ತೇನೆಂದು ಆ ಮೇಲೆ ಹೇಳುವೆ’
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ







