ಹೊಸಕೋಟೆಯನ್ನು ‘ಮಿನಿ ಬಿಹಾರ’ ಎಂದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್

ಬೆಂಗಳೂರು, ನ.25: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅರ್ಜಿ ಹಾಕುವವರೇ ಇರಲಿಲ್ಲ. ಮುನೇಗೌಡರು ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆನಂತರ ಎಸ್.ಎಂ.ಕೃಷ್ಣ ನನ್ನನ್ನು ಈ ಮಿನಿ ಬಿಹಾರಕ್ಕೆ ತಂದು ಹಾಕಿದರು ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದರು.
ಸೋಮವಾರ ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟಿಬಿ ನಾಗರಾಜ್ ಎಲ್ಲ ಮುಖ್ಯಮಂತ್ರಿಗಳಿಗಿಂತ ಚೆನ್ನಾಗಿದ್ದಾನೆ. ಯಾರ ಮುಂದೆಯೂ ಕೈ ಚಾಚುವ ಅಗತ್ಯ ನನಗಿಲ್ಲ ಎಂದರು. ಅಲ್ಲದೇ, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು ಸೇರಿದಂತೆ ಯಾವ ಜನಪ್ರತಿನಿಧಿಗಳಿಗೂ ನಾನು ಬೆಲೆ ಕಟ್ಟಲು ಹೋಗಿಲ್ಲ. ಸತ್ಯವನ್ನು ಎಂದಿಗೂ ಮರೆ ಮಾಚಲು ಸಾಧ್ಯವಿಲ್ಲ. ಅದೇ ರೀತಿ ಸುಳ್ಳಿಗೆ ನೆಲೆಯೂ ಇರುವುದಿಲ್ಲ ಎಂದು ಅವರು ಹೇಳಿದರು.
ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬುದ್ಧಿ ಭ್ರಮಣೆಯಾದಂತಿದೆ. ಆದುದರಿಂದ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಲು ಯಾರಾದರೂ 120 ಕೋಟಿ ರೂ.ಗಳನ್ನು ಕೊಡುತ್ತಾರಾ? ಆತನಿಗೆ 120 ಲಕ್ಷ ರೂ.ಗಳ ಆಫರ್ ಕೂಡ ನಾನು ಕೊಟ್ಟಿಲ್ಲ ಎಂದು ನಾಗರಾಜ್ ಹೇಳಿದರು.





