ಮಂಗಳೂರು: ಜಮೀಯ್ಯತುಲ್ ಫಲಾಹ್ ವತಿಯಿಂದ ಎಸೆಸೆಲ್ಸಿ ವರ್ಕ್ ಶಾಪ್

ಮಂಗಳೂರು, ನ. 25: ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕವು ಅಂಜುಮಾನ್ ವಿದ್ಯಾಸಂಸ್ಥೆ ಜೋಕಟ್ಟೆ ಮತ್ತು ಮುಕ್ಕ, ನೂರುಲ್ ಹುದಾ ವಿದ್ಯಾಸಂಸ್ಥೆ ಕಾಟಿಪಳ್ಳ ಮತ್ತು ಹಿದಾಯತ್ ವಿದ್ಯಾಸಂಸ್ಥೆ ಸೂರಿಂಜೆ ಇದರ ಸಹಯೋಗದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ‘ಎಸೆಸೆಲ್ಸಿ ವರ್ಕ್ ಶಾಪ್-2019’ ಎಂಬ ಹೆಸರಲ್ಲಿ ಒಂದು ದಿನದ ಕಾರ್ಯಕ್ರಮವು ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.
ಘಟಕದ ಉಪಾಧ್ಯಕ್ಷ ಶೇಖ್ ಅಬ್ದುಲ್ ಖಾದರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಮೀಯ್ಯತುಲ್ ಫಲಾಹ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಫರ್ವೇಝ್ ಅಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂಸಬ್ಬ ಜೋಕಟ್ಟೆ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ನಝೀರ್ ಅಹ್ಮದ್ ಸ್ವಾಗತಿಸಿ, ವಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಯಾಕೂಬ್ ನಡ, ವಸಂತ ಕುಮಾರ್ ನಿಟ್ಟೆ, ಶುಭ ಭಟ್ ಮತ್ತು ಸುನೀತಾ ಪೈ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಹೇಳಿಕೊಟ್ಟರು. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದರು. ವಿವಿಧ ಶಾಲೆಗಳ ಸುಮಾರು 200 ವಿದ್ಯಾಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕ ಪಿ.ಬಿ.ಎ.ರಝಾಕ್, ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಶಾಲೆಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.













