'ಆಧಾರ ರಹಿತ, ಸುಳ್ಳು ಆರೋಪ': ಬಿಜೆಪಿ ನಾಯಕ ಸೇರಿ ಇಬ್ಬರ ವಿರುದ್ಧ ಕೆ.ಜೆ.ಜಾರ್ಜ್ ಮಾನನಷ್ಟ ಮೊಕದ್ದಮೆ

ಬೆಂಗಳೂರು, ನ. 25: ‘ನನ್ನ ವಿರುದ್ಧ ಆಧಾರರಹಿತ, ಸುಳ್ಳು ಆರೋಪ ಮಾಡುವ ಮೂಲಕ ನನ್ನ ತೇಜೋವಧೆ ಮಾಡಿದ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮತ್ತು ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಬ್ಬರು ಮುಖಂಡರ ವಿರುದ್ಧ ಖಾಸಗಿ ದೂರು ದಾಖಲಿಸಿದ ಬಳಿಕ ಮಾತನಾಡಿದ ಕೆ.ಜೆ. ಜಾರ್ಜ್, ‘ನನ್ನ ವಿರುದ್ಧ ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದ ಆರೋಪಗಳನ್ನು ನಿರಂತರವಾಗಿ ಮಾಡಿದ್ದು, ಇದರಿಂದ ನನ್ನ ತೇಜೋವಧೆ ಮತ್ತು ಮಾನನಷ್ಟ ಆಗಿದೆ. ಈ ಹಿನ್ನೆಲೆಯಲ್ಲಿ ಮಾನನಷ್ಟ ಪ್ರಕರಣ ಹೂಡಿದ್ದೇನೆ. ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇನೆ ಎಂದರು.
‘ನಾನು ಅಕ್ರಮ ಆಸ್ತಿ ಗಳಿಕೆ ಮಾಡಿದ್ದೇನೆ, ನನ್ನ ಪುತ್ರ ಮತ್ತು ಪುತ್ರಿಯ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದೇನೆ, ವಿದೇಶದಲ್ಲಿಯೂ ನಾನು ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿದ್ದೇನೆಂದು ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ಸಾಮಾಜಿಕ ಹೋರಾಟಗಾರ ರವಿಕೃಷ್ಣಾರೆಡ್ಡಿ ದೂರು ನೀಡಿದ್ದು, ಅಲ್ಲದೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರಿದ್ದರು. ನಾನು ಯಾವುದೇ ಅಕ್ರಮ ಆಸ್ತಿ ಗಳಿಕೆ ಮಾಡಿಲ್ಲ. ಈ ಬಗ್ಗೆ ನಾನು ಹಲವು ಬಾರಿ ಸ್ಪಷ್ಟಣೆ ನೀಡಿದ್ದೇನೆ. ಆದರೂ, ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮತ್ತು ರವಿಕೃಷ್ಣಾರೆಡ್ಡಿ ಸುಳ್ಳು ಆರೋಪ ಮಾಡಿದ್ದಾರೆ. ನಾನು ನ್ಯಾಯಯುತವಾಗಿ ವ್ಯವಹಾರ ಮಾಡಿಕೊಂಡು, ತೆರಿಗೆ ಕಟ್ಟುಕೊಂಡು ಬಂದಿದ್ದೇನೆ ಎಂದು ಜಾರ್ಜ್ ಇದೇ ವೇಳೆ ಸ್ಪಷ್ಟಣೆ ನೀಡಿದರು.







