ದೇಶದ 15 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದ ಶೇ. 90 ಶಾಲೆಗಳಲ್ಲಿ ಈ ಸೌಲಭ್ಯವೇ ಇಲ್ಲ !

PTI
ಹೊಸದಿಲ್ಲಿ, ನ. 25: ದೇಶದ 14 ದೊಡ್ಡ ಹಾಗೂ ಸಣ್ಣ ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶಗಳ ಶೇ. 90ಕ್ಕಿಂತ ಅಧಿಕ ಶಾಲೆಗಳಲ್ಲಿ ಅಂತರ್ಜಾಲ ಸೌಲಭ್ಯ ಇಲ್ಲ. ಕೇಂದ್ರಾಡಳಿತ ಪ್ರದೇಶಗಳಲ್ಲಿ ನೂತನವಾಗಿ ರೂಪಿಸಲಾದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಹಾಗೂ ಕಾಶ್ಮೀರದಲ್ಲಿ ಕೇವಲ ಶೇ. 2.98 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಂತರ್ಜಾಲ ಸೌಲಭ್ಯ ಒದಗಿಸಲಾಗಿದೆ.
ಉತ್ತರಪ್ರದೇಶದಂತಹ ದೊಡ್ಡ ರಾಜ್ಯಗಳಲ್ಲಿ 6ರಿಂದ 10ನೇ ತರಗತಿ ಕಲಿಯುವ ವಿದ್ಯಾರ್ಥಿಗಳಿರುವ ಶೇ. 97.68 ಸರಕಾರಿ ಶಾಲೆಗಳು ಅಂತರ್ಜಾಲ ಸೌಲಭ್ಯದಿಂದ ವಂಚಿತವಾಗಿವೆ. ಇತರ ದೊಡ್ಡ ರಾಜ್ಯಗಳಾದ ಕರ್ನಾಟಕ, ಒರಿಸ್ಸಾ, ಬಿಹಾರಗಳಲ್ಲಿ ಅನುಕ್ರಮವಾಗಿ ಶೇ. 3.75, ಶೇ. 8.7 ಹಾಗೂ 3.07 ಶಾಲೆಗಳಲ್ಲಿ ಮಾತ್ರ ಅಂತರ್ಜಾಲ ಸೌಲಭ್ಯ ಇದೆ.
ಈ ದೊಡ್ಡ ರಾಜ್ಯಗಳ ಶಾಲೆಗಳಿಗೆ ಹೋಲಿಸಿದರೆ ದಿಲ್ಲಿ ಅಂತರ್ಜಾಲ ಹೊಂದಿದ ಶಾಲೆಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಹೊಸದಿಲ್ಲಿಯ ಶೇ. 99.91 ಶಾಲೆಗಳಲ್ಲಿ ಅಂತರ್ಜಾಲ ಸೌಲಭ್ಯ ಇದೆ. ದಿಲ್ಲಿಯಲ್ಲಿ 1108 ಹಾಗೂ ಉತ್ತರಪ್ರದೇಶಗಳಲ್ಲಿ 1288 ಸರಕಾರಿ ಶಾಲೆಗಳಿವೆ.
ಚಂಡಿಗಢ ಹಾಗೂ ಕೇರಳದ ಸರಕಾರಿ ಶಾಲೆಗಳಲ್ಲಿ ಅನುಕ್ರಮವಾಗಿ ಶೇ. 100 ಹಾಗೂ ಶೇ 84.07 ವಿದ್ಯಾರ್ಥಿಗಳಿಗೆ ಅಂತರ್ಜಾಲ ಸೌಲಭ್ಯ ಇದೆ.
ಲೋಕಸಭೆಯಲ್ಲಿ ನವೆಂಬರ್ 23ರಂದು ರಾಜೀವ್ ಪ್ರತಾಪ್ ರೂಡಿ ದೇಶದಲ್ಲಿ ವಿದ್ಯುತ್, ಶೌಚಾಲಯ ಹಾಗೂ ಅಂತರ್ಜಾಲ ಸೌಲಭ್ಯ ಇರುವ ಶಾಲೆಗಳ ಸಂಖ್ಯೆ ಹಾಗೂ ಶೇಕಡದ ಬಗ್ಗೆ ಪ್ರಶ್ನಿಸಿದಾಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಈ ಮಾಹಿತಿ ಹಂಚಿಕೊಂಡಿದ್ದಾರೆ.
ರಮೇಶ್ ಪೋಖ್ರಿಯಾಲ್ ಅವರು ಹಂಚಿಕೊಂಡ ವಿವರಗಳು 6ರಿಂದ 12ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾಥಿಗಳನ್ನು ಒಳಗೊಂಡಿದೆ.







