ರಂಗಸ್ಥಳ ರಣರಂಗವಾಗದಿರಲಿ : ಕೇಮಾರು ಶ್ರೀ

ಮಂಗಳೂರು, ನ. 25: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಆದ ಅವಮಾನ ವ್ಯಕ್ತಿಗಲ್ಲ; ಯಕ್ಷಗಾನಕ್ಕೆ. ಘಟನೆಯಿಂದ ಕರಾವಳಿಯ ಜನತೆ ತೀವ್ರ ಬೇಸರಗೊಂಡಿದ್ದಾರೆ. ರಂಗಸ್ಥಳ ರಣರಂಗವಾಗಬಾರದು ಎಂದು ಕೇಮಾರು ಈಶ ವಿಠಲ ಶ್ರೀ ತಿಳಿಸಿದ್ದಾರೆ.
ಪಟ್ಲಾಭಿಮಾನಿ ಬಳಗ ಮಂಗಳೂರು ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಕಟೀಲು ಬೀದಿಯಲ್ಲಿ ಮಾಡಿದ ಅವಮಾನ ಖಂಡಿಸಿ ನಡೆಸಿದ ಬೃಹತ್ ಪ್ರತಿಭಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕಟೀಲು ಕ್ಷೇತ್ರದಲ್ಲಿ ಇಂತಹ ಅವಘಡ ಸಂಭವಿಸುತ್ತದೆ ಎನ್ನುವುದನ್ನು ನಿರೀಕ್ಷಿರಲಿಲ್ಲ. ಏನೇ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆತುರ ನಿರ್ಧಾರ ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಪ್ಪನ್ನು ಸರಿಪಡಿಸಿಕೊಳ್ಳ ಬೇಕು ಎಂದು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರಾಜಾರಾಮ್ ಭಟ್, ಕಟೀಲೇಶ್ವರ ಸನ್ನಿಧಾನದಲ್ಲಿ ಪಟ್ಲರಿಗೆ ಮಾಡಿದ ಅವಮಾನವು ಅಮಾನವೀಯ ಕೆಲಸವಾಗಿದೆ. ಇಂಥಹ ದುಷ್ಕೃತ್ಯಗಳು ಯಕ್ಷಗಾನದ ಇತಿಹಾಸದಲ್ಲೇ ನಡೆದಿರಲಿಲ್ಲ. ಇಡೀ ಕರಾವಳಿಯೇ ತಲೆತಗ್ಗಿಸುವಂತಾಗಿದೆ. ಯಕ್ಷಾಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದಿದೆ ಎಂದರು.
ಇಲ್ಲಿಯವರೆಗೂ ಯಕ್ಷಗಾನವು ಒಂದು ಸೇವೆಯಾಗಿತ್ತು. ಆದರೆ ಇತ್ತೀಚೆಗೆ ಇದೊಂದು ವಾಣಿಜ್ಯೋದ್ಯಮವಾಗಿ ಬೆಳೆಯುತ್ತಿರು ವುದು ಅಪಾಯಕಾರಿ. ಕಟೀಲಿನಲ್ಲಿ ಹಣ್ಣು-ಹಂಪಲಿಗೆ ಏಲಂ ನಡೆದರೆ ತೊಂದರೆಯಿಲ್ಲ. ಆದರೆ ಯಕ್ಷಗಾನಕ್ಕೇ ಏಲಂ ನಡೆದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನ್ಯಾಯವಾದಿ ಸಹನಾ ಕುಂದರ್, ಅನಿಲ್ ದಾಸ್ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ರವೀಂದ್ರ ಶೆಟ್ಟಿ ಬಜಗೋಳಿ, ಸವಣೂರು ಸೀತಾರಾಮ ಶೆಟ್ಟಿ, ಸಂಜಯಕುಮಾರ್ ಗೋಣಿಬೀಡು, ಗಡಿನಾಡ ರಕ್ಷಣಾ ವೇದಿಕೆಯ ಸಿದ್ದೀಕ್ ತಲಪಾಡಿ, ರಾಘವೇಂದ್ರ ಮಯ್ಯ, ಚಿಕ್ಕಪ್ಪ ನಾಯ್ಕಿ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ರೈ ಸ್ವಾಗತಿಸಿದರು. ಕೃಷ್ಟ ಶೆಟ್ಟಿ ಪಾಲೇಮಾರ್ ನಿರೂಪಿಸಿದರು.











