ಸಂತ್ರಸ್ತರಿಗೆ 50 ಸಾವಿರ ರೂ. ಪರಿಹಾರ, ನೂತನ ಮನೆ ನಿರ್ಮಾಣ: ಸಚಿವ ವಿ. ಸೋಮಣ್ಣ ಭರವಸೆ
ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ

ಬೆಂಗಳೂರು, ನ.25: ಹುಳಿಮಾವು ಕೆರೆ ಕೋಡಿ ಒಡೆದು ಹೋದ ಜಾಗದಲ್ಲಿ ಕಾಂಕ್ರೀಟ್ ಬ್ಲಾಕ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಿವಿಲ್ ಕಾಮಗಾರಿಗೆ ತಜ್ಞರನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಭವಿಷ್ಯದಲ್ಲಿ ಕೋಡಿ ಒಡೆಯದಂತೆ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200 ಟ್ರಕ್‌ಗಳ ಸಹಾಯದಿಂದ ಮಣ್ಣು ತಂದು ಸುರಿದ ನಂತರವಷ್ಟೇ ಪ್ರವಾಹದ ತೀವ್ರತೆ ಕಡಿಮೆಯಾಯಿತು. ಕೋಡಿ ಒಡೆದು ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಆಗಿರುವ ನಷ್ಟವನ್ನು ಅಂದಾಜಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ನಂತರ ಎಲ್ಲ ಸಂತ್ರಸ್ತರಿಗೂ ಪರಿಹಾರ ಒದಗಿಸಲಾಗುವುದು ಎಂದು ಅವರು ಹೇಳಿದರು.
ಉದ್ದೇಶಪೂರ್ವಕವಾಗಿ ಕೆಲ ಕಿಡಿಗೇಡಿಗಳು ಕೋಡಿ ಒಡೆದು ಹಾಕಿರುವ ಸಾಧ್ಯತೆ ಇರುವುದರಿಂದ ಸುತ್ತಮುತ್ತಲ ಮನೆಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಹುಳಿಮಾವು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದರು.
ಕೆರೆ ಕೋಡಿ ಒಡೆದ ಜಾಗಕ್ಕೆ ಸಚಿವ ವಿ. ಸೋಮಣ್ಣ ಭೇಟಿ ನೀಡಿ ಪರಶೀಲನೆ ನಡೆಸಿ ಮಾತನಾಡಿದ ಅವರು, ಸಂತ್ರಸ್ತರ ನೆರೆವಿಗಾಗಿ 50 ಸಾವಿರ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಸಂಪೂರ್ಣವಾಗಿ ಹಾಳಾದ ಮನೆಗಳಿಗೆ ಸರಿಯಾದ ದಾಖಲೆಗಳಿದ್ದರೆ ವಸತಿ ಇಲಾಖೆಯಿಂದ ನೂತನ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಆರ್. ಅಶೋಕ್, ಈ ಅವಾಂತರಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಪಾಲಿಕೆಯ ಚೀಫ್ ಇಂಜಿನಿಯರಗಳು ಎಲ್ಲೇ ಇದ್ದರು ಬೇಗ ಕರೆಸಿ. ಇಲ್ಲಿಗೆ ಬಂದ ಕೊಡಲೇ ಅವರನ್ನು ಪೊಲೀಸ್ ಸ್ಟೇಷನ್‌ನಲ್ಲಿ ಕೂರಿಸಿ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ಗೆ ಅವರಿಗೆ ಸೂಚಿಸಿದರು.
ಪಾಲಿಕೆ ಆಯುಕ್ತ ಎಚ್. ಅನಿಲ್ ಕುಮಾರ್ ಮಾತನಾಡಿ, ಆರ್.ಆರ್. ಲೇಔಟ್, ಕೃಷ್ಣ ಲೇಔಟ್, ಅವನಿ ಶೃಂಗೇರಿ ಬಡಾವಣೆ, ರಾಯಲ್ ರೆಸಿಡೆನ್ಸಿ ಮುಂತಾದ ಪ್ರದೇಶದಲ್ಲಿ ಸುಮಾರು 2-4 ಅಡಿವರೆಗೂ ನೀರು ಹರಿದು ಎಲ್ಲ ಮನೆಗಳು ಜಲಾವೃತವಾಗಿ ಮನೆ ಬಳಕೆಯ ಎಲ್ಲಾ ವಸ್ತುಗಳು ಹಾಳಾಗಿವೆ. ಸುಮಾರು 800 ಮನೆಗಳು ನೀರಿನಲ್ಲಿ ಮುಳುಗಿರುವ ಅಂದಾಜಿಸಲಾಗಿದೆ. ವಾಹನ ಸೇರಿದಂತೆ ಇತರ ವಸ್ತುಗಳ ಹಾನಿಯ ಕುರಿತು ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಕಂದಾಯ ವಿಭಾಗದ ಅಧಿಕಾರಿಗಳೂ ಮಹಜರ್ ನಡೆಸಿ ವರದಿ ನೀಡಲಿದ್ದಾರೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.







