ಪವರ್‌ನಿಂದ ಮೂರನೇ ವರ್ಷದ ‘ಪವರ್ ಪರ್ಬ’ಕ್ಕೆ ಸಿದ್ಧತೆ
ಉಡುಪಿ, ನ.25: ಮಣಿಪಾಲದ ‘ಪವರ್’ (ಪ್ಲಾಟ್‌ಫಾರಂ ಆಫ್ ವಿಮನ್ ಎಂಟರ್‌ಪ್ರೆನ್ಯೂರ್ಸ್- ಮಹಿಳಾ ಉದ್ದಿಮೆದಾರರ ವೇದಿಕೆ) ಮೂರನೇ ‘ಪವರ್ ಪರ್ಬ’ವನ್ನು 2020ರ ಜ.10ರಿಂದ 12ರವರೆಗೆ ಉಡುಪಿ ಎಂಜಿಎಂ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗ ಮಂದಿರಲ್ಲಿ ಆಯೋಜಿ ಸಲು ಸಿದ್ದತೆಗಳನ್ನು ನಡೆಸುತ್ತಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಶ್ರುತಿ ಶೆಣೈ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪವರ್ ಪರ್ಬದಲ್ಲಿ ಮಹಿಳಾ ಉದ್ದಿಮೆದಾರರು ತಾವು ತಯಾರಿಸಿದ ವಿವಿಧ ವಸ್ತುಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದರು. ಈಗಾಗಲೇ ಎರಡು ಬಾರಿ ನಡೆಸಿರುವ ಈ ಪ್ರದರ್ಶನ ಹಾಗೂ ಮಾರಾಟ ಮೇಳ ಅತ್ಯಂತ ಯಶಸ್ವಿಯಾಗಿದೆ ಎಂದವರು ತಿಳಿಸಿದರು.
ಸಮಾಜದ ಎಲ್ಲಾ ಸ್ತರದ ಮಹಿಳಾ ಉದ್ಯಮಿಗಳ ಕೌಶಲ್ಯ, ಸಾಮರ್ಥ್ಯಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಗುರಿಯೊಂದಿಗೆ ಪವರ್ ಸಂಸ್ಥೆಯನ್ನು 2009ರಲ್ಲಿ ಪ್ರಾರಂಭಿಸಲಾಗಿದೆ. ಮಹಿಳಾ ಉದ್ಯಮಿಗಳಿಗೆ ವಿಶೇಷ ಮಾಹಿತಿ ಕಾರ್ಯಾಗಾರಗಳನ್ನು ಏರ್ಪಡಿಸಿ, ಅವರ ಉದ್ಯಮಗಳು ಸಾರ್ವಜನಿಕರಿಗೆ ಪರಿಚಯಿಸುವ ಕೆಲಸವನ್ನೂ ಸಂಸ್ಥೆ ಮಾಡುತ್ತಿದೆ ಎಂದರು.
‘ಪವರ್ ಪರ್ಬ-2020’ ಗ್ರಾಮೀಣ ಮಹಿಳೆಯರಿಗೆ ಸುವರ್ಣಾವಕಾಶ. ತಮ್ಮ ಉದ್ಯಮಶೀಲತೆಗೆ ಸೂಕ್ತ ಪ್ರೋತ್ಸಾಹ, ತಮ್ಮ ಕೌಶಲಗಳನ್ನು ಒರೆಗೆ ಹಚ್ಚಲು ಇದೊಂದು ಅವಕಾಶವಾಗಿದೆ. ಈ ಬಾರಿಯ ಪವರ್ ಪರ್ಬದಲ್ಲಿ ಮಹಿಳಾ ಉದ್ಯಮಿಗಳು ಜೊತೆಗೆ ಮಹಿಳಾ ನಾಯಕರು, ಸಾಧಕಿಯರು, ಶಿಕ್ಷಣ ತಜ್ಞೆಯರು, ವಿಷಯ ತಜ್ಞರು, ಯಶಸ್ವಿ ಉದ್ಯಮಿಗಳು, ಬಂಡವಾಳ ಹೂಡಿಕೆದಾರರು, ಸಂಪನ್ಮೂಲ ಸಂಸ್ಥೆಗಳು, ಸರಕಾರದ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶ್ರುತಿ ಶೆಣೈ ತಿಳಿಸಿದರು.
ಕಾಲೇಜು ವಿದ್ಯಾರ್ಥಿನಿಯರಿಗೂ ತಮ್ಮ ಭವಿಷ್ಯದ ಬಗ್ಗೆ ಚಿಂತಿಸಲು ಇದೊಂದು ಸುವರ್ಣಾವಕಾಶವಾಗಿದೆ. ಸುಮಾರು 200ಕ್ಕೂ ಅಧಿಕ ವ್ಯಾಪಾರ ಮಳಿಗೆಗಳು ಇಲ್ಲಿ ಇರುವ ನಿರೀಕ್ಷೆ ಇದೆ. ಇಲ್ಲಿ ವ್ಯಾಪಾರ ಮಳಿಗೆ ತೆರೆಯಲು ಇಚ್ಛಿಸುವವರು ಡಿ.15ರೊಳಗೆ ಹೆಸರು ನೊಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಉಡುಪಿ ಪರ್ಯಾಯದ ಸಂಭ್ರಮದಲ್ಲಿರುವುದರಿಂದ ಜನರನ್ನು ಆಕರ್ಷಿಸಲು ಮಕ್ಕಳಿಗೆ ಹಾಗೂ ಯುವಜನತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಸಾರ್ವಜನಿಕರಿಗೂ ಹಲವು ಸ್ಪರ್ಧೆಗಳಿರುತ್ತವೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪವರ್ ಸಂಸ್ಥೆಯ ಪದಾಧಿಕಾರಿಗಳಾದ ಪುಷ್ಪಾ ಜಿ.ರಾವ್, ಸುಪ್ರಿಯಾ ಕಾಮತ್, ಪ್ರಿಯಾ ಕಾಮತ್, ಲಕ್ಷ್ಮೀ ರಾವ್ ಹಾಗೂ ಸೋನಾ ಉಪಸ್ಥಿತರಿದ್ದರು.







