ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ವಿಶೇಷ ಪೋಸ್ಟಲ್ ಕವರ್ ಬಿಡುಗಡೆ

ಬೆಂಗಳೂರು, ನ.25: ನಗರದ ಪ್ರಧಾನ ಅಂಚೆ ಕಚೇರಿಯ ಮೇಘದೂತ ಸಭಾಂಗಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ವಿಶ್ವ ಪರಂಪರಾ ಸಪ್ತಾಹದ ಅಂಗವಾಗಿ ವಿಶೇಷ ಪೋಸ್ಟಲ್ ಕವರ್ ಮತ್ತು ಅಶೋಕ ಚಕ್ರವರ್ತಿ ಕೆತ್ತಿಸಿದ್ದ ಶಿಲ್ಪಕಲೆಗಳನ್ನು ಸಾರುವ ನೂತನ ಪೋಸ್ಟಲ್ ಕವರ್‌ಗಳನ್ನು ಬಿಡುಗಡೆಗೊಳಿಸಿತು.
ಪೋಸ್ಟಲ್ ಕವರ್ ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೊಬೊ, ರಾಜ್ಯದ ಐತಿಹಾಸಿಕ ತಾಣಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಅಜಂತಾ, ಯಲ್ಲೊರದಲ್ಲಿರುವ ಪ್ರಾಚೀನ ಸ್ಮಾರಕಗಳ ರಕ್ಷಣೆ ಮತ್ತು ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಾಚೀನ ಸ್ಮಾರಕಗಳು ದೇಶದ ಆಸ್ತಿ ಇದ್ದಂತೆ. ಅವುಗಳ ರಕ್ಷಣೆ ಮಾಡುವುದು ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಶಿಲ್ಪಕಲಾ ಶಾಸನಗಳು ಮತ್ತು ಹಳೆಯ ಕಲಾಪ್ರಕಾರಗಳು ಮತ್ತು ಕಲ್ಲುಗಳು ಯಾರಿಗೂ ಗೊತ್ತಿಲ್ಲದಂತಹ ವಿಷಯವೇನಲ್ಲ ಎಂಬುದು ನನ್ನ ಭಾವನೆ. ಪ್ರತಿಯೊಂದು ಕಲ್ಲೂ ಸಹ ತನ್ನದೇ ಆದ ಇತಿಹಾಸವನ್ನು ಸಾರುತ್ತದೆ. ಪುರಾತತ್ವದ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ದಾಖಲೆಗಳು ತನ್ನದೇ ಆದ ಇತಿಹಾಸವನ್ನು ಹೇಳುತ್ತದೆ. ಪ್ರತಿಯೊಂದು ಪ್ರಾಚೀನ ವಸ್ತುಗಳು ಮನುಷ್ಯರ ಕಠಿಣ ಶ್ರಮ ಮತ್ತು ಅವರ ಕನಸುಗಳನ್ನು ಬಿಂಬಿಸುತ್ತದೆ ಎಂದರು.
ಎಲ್ಲರಿಗೂ ಅರ್ಥವಾಗುವಂತೆ ಅತಿ ಸರಳವಾದ ಭಾಷೆಯಲ್ಲಿ ಧರ್ಮೋಪದೇಶವನ್ನು ಕಲ್ಲುಬಂಡೆಗಳು, ಶಿಲಾಸ್ತಂಭಗಳು, ಗವಿಗಳ ಗೋಡೆಯ ಮೇಲೂ ಅಶೋಕ ಚಕ್ರವರ್ತಿ ಕೆತ್ತಿಸಿದ್ದಾನೆ. ಇವು ಪ್ರಧಾನವಾದ ಮತ್ತು ಜನರ ಕಣ್ಣಿಗೆ ಸುಲಭವಾಗಿ ಗೋಚರಿಸುವ ಪ್ರದೇಶಗಳಲ್ಲಿ ಕೆತ್ತಲ್ಪಟ್ಟಿವೆ. ಅವುಗಳಲ್ಲಿ ಧರ್ಮದ ಸ್ವರೂಪವೂ ಜನರ ನಡವಳಿಕೆಗಾಗಿ ನೀತಿ ನಿಯಮಗಳೂ ಇವೆ. ಈ ಶಾಸನಗಳು ಯಾವ ನಿಯತವಾದ ಕಾಲಮಾನವನ್ನೂ ಸೂಚಿಸದೆ ಅಶೋಕನ ಆಳ್ವಿಕೆಯ ವರ್ಷಗಳ ಗಣನೆಯನ್ನು ಮಾತ್ರ ಹೇಳುತ್ತವೆ. ಈ ಉದ್ದೇಶದಿಂದ ಅಶೋಕ ಚಕ್ರವರ್ತಿಯ ಕಾಲದಲ್ಲಿ ಕೆತ್ತಿಸಿರುವ ಶಿಲಾ ಶಾಸನಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ವಿಶೇಷ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ.ಪಿ ಪೂಣಚ್ಚ, ಐಪಿಎಸ್ ಅಧಿಕಾರಿ ಅಮರ್ ಕುಮಾರ್ ಪಾಂಡೆ, ಡಾ.ಶಿವಕಾಂತ್ ಬಾಜಪೈ, ಪ್ರೀತಿ, ಮುರಳಿ, ಚಂದ್ರು ಉಪಸ್ಥಿತರಿದ್ದರು.







