ಮಹಾರಾಷ್ಟ್ರದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ನಮ್ಮದೇ: ಸೋನಿಯಾ ಗಾಂಧಿ

ಹೊಸದಿಲ್ಲಿ, ನ.26: ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷಕ್ಕೆ 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ‘‘ವಿಶ್ವಾಸಮತ ಯಾಚನೆಯಲ್ಲಿ ಗೆಲುವು ನಮ್ಮದೇ’’ ಎಂದು ಸುದ್ದಿಗಾರರ ಬಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶರದ್ ಪವಾರ್ ನೇತೃತ್ವದ ಎನ್ಸಿಪಿ, ಕಾಂಗ್ರೆಸ್ ಹಾಗೂ ಸೈದ್ದಾಂತಿಕವಾಗಿ ವಿರುದ್ಧ ದಿಕ್ಕಿನಲ್ಲಿರುವ ಶಿವಸೇನೆ ಪಕ್ಷಗಳು ಒಟ್ಟಿಗೆ ಸೇರಿ ಮಹಾರಾಷ್ಟ್ರ ವಿಕಾಸ ಅಘಾಡಿಯನ್ನು ರಚಿಸಿಕೊಂಡು ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಯತ್ನಿಸುತ್ತಿವೆ.
ಮಹಾರಾಷ್ಟ್ರದಲ್ಲಿ ಬಹುಮತಕ್ಕೆ 145 ಶಾಸಕರ ಅಗತ್ಯವಿದ್ದು, ನಮ್ಮ ಬಳಿ 162 ಶಾಸಕರು ಇದ್ದಾರೆ ಎಂದು ಮೂರು ಪಕ್ಷಗಳ ಮೈತ್ರಿಕೂಟ ಹೇಳಿಕೊಂಡಿವೆ.
‘‘ವಿಶ್ವಾಸಮತ ಯಾಚನೆ ಪ್ರಕ್ರಿಯೆ ವಿಳಂಬವಾದರೆ, ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇದ್ದರೆ ಪ್ರಜಾಪ್ರಭುತ್ವದ ವೌಲ್ಯವನ್ನು ಕಾಪಾಡಲು ನ್ಯಾಯಾಲಯ ಮುಂದಾಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆದಷ್ಟು ಬೇಗನೆ ವಿಶ್ವಾಸಮತ ಸಾಬೀತುಪಡಿಸುವುದು ಪರಿಣಾಮಕಾರಿ’’ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ