ಮಂಗಳೂರು: ಮಾದಕ ‘ಎಂಡಿಎಂಎ’ ವಶ ; ಇಬ್ಬರ ಬಂಧನ

ಮಂಗಳೂರು, ನ. 26: ನಗರದ ಉರ್ವ ಚಿಲಿಂಬಿ ಶಿರ್ಡಿ ಸಾಯಿ ಮಂದಿರ ಸಮೀಪದ ಕಾರಿನಲ್ಲಿ ಕುಳಿತು ಮಾದಕ ‘ಎಂಡಿಎಂಎ’ ಪೌಡರ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸುರತ್ಕಲ್ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮುಹಮ್ಮದ್ ನಿಯಾಝ್ (25), ಪಾಂಡೇಶ್ವರದ ಅಮೃತನಗರ ನಿವಾಸಿ ಮುಹಮ್ಮದ್ ಅಜೀಂ (30) ಬಂಧಿತ ಆರೋಪಿಗಳು.
ಮಂಗಳೂರು ನಗರದ ಇಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನದಂತೆ ನಗರದ ಉರ್ವ ಚಿಲಿಂಬಿ ಶಿರ್ಡಿ ಸಾಯಿ ಮಂದಿರ ಸಮೀಪದ ರಸ್ತೆಯಲ್ಲಿ ಆಲ್ಟೋ ಕಾರಿನಲ್ಲಿ ಕುಳಿತು ಇಬ್ಬರು ಎಂಡಿಎಂಎ ಫೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳಿಂದ 4.80 ಗ್ರಾಂ ತೂಕದ ಎಂಡಿಎಂಎ ಫೌಡರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು, ಮೂರು ಮೊಬೈಲ್ ಹಾಗು 3,000 ರೂ. ನಗದು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಇಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






