ತಂದೆ, ಮಗನನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ: ಕುಮಾರಸ್ವಾಮಿಯನ್ನು ಕುಟುಕಿದ ಜಗದೀಶ್ ಶೆಟ್ಟರ್

ಬೆಂಗಳೂರು, ನ.27: ಉಪ ಚುನಾವಣೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿಯೇ ಗೆಲ್ಲಲಿದ್ದು, ಬಿಜೆಪಿ ಸರಕಾರವೇ ಮುಂದುವರಿಯಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಂಗಳವಾರ ನಗರದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರವಾಗಿ ರೋಡ್‌ಶೋ ಹಾಗೂ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದೇನೆ. ಎಲ್ಲ ಕಡೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾವೇ ಎಲ್ಲ ಕಡೆ ಗೆಲ್ಲಲಿದ್ದೇವೆ ಎಂದರು.
ಗೋಪಾಲಯ್ಯ ಮಾಡಿರುವಂತಹ ಅಭಿವೃದ್ಧಿ ಕೆಲಸಗಳೇ ಅವರಿಗೆ ಶ್ರೀರಕ್ಷೆಯಾಗಲಿವೆ. ಜೆಡಿಎಸ್ ಪಕ್ಷ ರಾಜ್ಯದಲ್ಲಿ ನಶಿಸಿ ಹೋಗುತ್ತಿದೆ. ಕಾಂಗ್ರೆಸ್ ಸಂಪೂರ್ಣ ಇಲ್ಲವಾಗುವ ಹಂತಕ್ಕೆ ತಲುಪಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕ ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ ಎಂದು ನುಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದ ಅವರು, ಕುಮಾರಸ್ವಾಮಿ ತಮ್ಮ ತಂದೆ ದೇವೇಗೌಡರನ್ನು ತುಮಕೂರಿನಿಂದ ಗೆಲ್ಲಿಸಿಕೊಂಡು ಬರಲು ಸಾಧ್ಯವಾಗಲಿಲ್ಲ. ಮಂಡ್ಯದಲ್ಲಿ ಮಗನನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಮೊದಲು ನಿಮ್ಮ ಪಕ್ಷದ ಅಭ್ಯರ್ಥಿಗಳ ಠೇವಣಿಯನ್ನು ಉಳಿಸಿಕೊಳ್ಳಿರಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ಸುಭದ್ರವಾಗಿರಲಿದೆ. ಈ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲ್ಲುವ ಎಲ್ಲರೂ ಸಚಿವರಾಗುತ್ತಾರೆ. ಈ ಕುರಿತು ಯಾರೂ ಆತಂಕಪಡಬೇಡಿ. ಗೋಪಾಲಯ್ಯ ಗೆದ್ದೇ ಗೆಲ್ಲುತ್ತಾರೆ, ಅವರು ಸಚಿವರಾಗುತ್ತಾರೆ ಎಂದು ಜಗದೀಶ್ ಶೆಟ್ಟರ್ ಭರವಸೆ ನೀಡಿದರು. ಈ ವೇಳೆ ವಸತಿ ಸಚಿವ ಸೋಮಣ್ಣ, ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಸೇರಿದಂತೆ ಹಲವರಿದ್ದರು.







