‘ಶ್ವೇತಭವನದ ಮಾಜಿ ಅಧಿಕಾರಿ ಟ್ರಂಪ್ ವಾಗ್ದಂಡನೆ ವಿಚಾರಣೆಯಲ್ಲಿ ಸಾಕ್ಷ್ಯ ನುಡಿಯಬೇಕು’: ನ್ಯಾಯಾಧೀಶ
ವಾಶಿಂಗ್ಟನ್, ನ. 26: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕ ಸಂಸತ್ತು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಾಗ್ದಂಡನೆ ವಿಚಾರಣೆಯಲ್ಲಿ ಶ್ವೇತಭವನದ ಮಾಜಿ ವಕೀಲ ಡಾನ್ ಮೆಕ್‌ಗಾಹನ್ ಸಾಕ್ಷ್ಯ ನುಡಿಯಬೇಕು ಎಂದು ಆ ದೇಶದ ಫೆಡರಲ್ ನ್ಯಾಯಾಧೀಶರೊಬ್ಬರು ಸೋಮವಾರ ಹೇಳಿದ್ದಾರೆ.
ಅಧಿಕಾರಿಗಳು ಇಂಥ ವಿಚಾರಣೆಯಿಂದ ವಿನಾಯಿತಿ ಹೊಂದಿದ್ದಾರೆ ಎಂಬ ಶ್ವೇತಭವನದ ವಾದವನ್ನು ತಿರಸ್ಕರಿಸಿದ ನ್ಯಾಯಾಧೀಶರು, ‘ಯಾರೂ ಕಾನೂನಿಗಿಂತ ಮೇಲಲ್ಲ’ ಎಂದು ಘೋಷಿಸಿದರು ಎಂದು ಸಿಎನ್‌ಎನ್ ವರದಿ ಮಾಡಿದೆ.
2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಸಿರುವ ಮಾಜಿ ವಿಶೇಷ ವಕೀಲ ರಾಬರ್ಟ್ ಮುಲ್ಲರ್, ಮಾರ್ಚ್‌ನಲ್ಲಿ ಸಲ್ಲಿಸಿದ ತನ್ನ 448 ಪುಟಗಳ ವರದಿಯಲ್ಲಿ ಮೆಕ್‌ಗಾಹನ್‌ರ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು.
ತನ್ನ ವಿರುದ್ಧದ ವಾಗ್ದಂಡನೆ ತನಿಖೆಯ ವಿರುದ್ಧ ಟ್ರಂಪ್ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾ ನ್ಯಾಯಾಧೀಶ ಕೇಟಂಜಿ ಬ್ರೌನ್ ಜಾಕ್ಸನ್ ನೀಡಿರುವ ತೀರ್ಪು ಹಿನ್ನಡೆಯಾಗಿದೆ.
‘‘ಅಧ್ಯಕ್ಷರ ಸಹಾಯಕರೊಬ್ಬರು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಹಾಗೂ ಎಷ್ಟೇ ಮಹತ್ವವನ್ನು ಹೊಂದಿದ್ದರೂ ಹಾಗೂ ಸೂಕ್ಷ್ಮ ರಾಷ್ಟ್ರೀಯ ಭದ್ರತೆಯ ಯೋಜನೆಗಳಲ್ಲಿ ತೊಡಗಿದ್ದರೂ, ಅವರನ್ನು ಕ್ಷಮಿಸಲು ಅಥವಾ ಕಾನೂನು ಪ್ರಕಾರ ತೆಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳದೆ ಇರಲು ಅಧ್ಯಕ್ಷರಿಗೆ ಅಧಿಕಾರವಿಲ್ಲ’’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
‘‘ಇದನ್ನು ಸರಳವಾಗಿ ಹೇಳುವುದಾದರೆ, ಕಳೆದ 250 ವರ್ಷಗಳ ಅಮೆರಿಕದ ದಾಖಲಿತ ಇತಿಹಾಸದಿಂದ ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಿರುವುದೇನೆಂದರೆ ಅಧ್ಯಕ್ಷರು ರಾಜರುಗಳಲ್ಲ’’ ಎಂದರು.
ಮೆಕ್‌ಗಾಹನ್ 2018 ಅಕ್ಟೋಬರ್‌ನಲ್ಲಿ ತನ್ನ ಹುದ್ದೆಯನ್ನು ತೊರೆದರು. ಮುಲ್ಲರ್ ತನಿಖೆಗೆ ಅಡಚಣೆಯುಂಟುಮಾಡಲು ಟ್ರಂಪ್ ನಡೆಸಿರುವ ಪ್ರಯತ್ನಗಳ ಬಗ್ಗೆ ಸಾಕ್ಷ ನೀಡುವಂತೆ ಹೌಸ್ ನ್ಯಾಯಾಂಗ ಸಮಿತಿ ನೀಡಿದ್ದ ಆದೇಶವನ್ನು ಅವರು ಈ ವರ್ಷದ ಮೇ ತಿಂಗಳಲ್ಲಿ ತಿರಸ್ಕರಿಸಿದ್ದರು.







