ಚಿನ್ಮಯಾನಂದನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಯುವತಿಗೆ ಪರೀಕ್ಷೆ ಬರೆಯಲು ತಡೆ

PTI
ಶಹಜಹಾನ್ಪುರ, ನ.26: ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ವಿದ್ಯಾರ್ಥಿನಿಗೆ ಹಾಜರಾತಿ ಕಡಿಮೆ ಇರುವ ಕಾರಣ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ ಎಂದು ವರದಿಯಾಗಿದೆ.
ಸೋಮವಾರ , ಈಕೆ ಬಿಗಿ ಭದ್ರತೆಯೊಂದಿಗೆ ಎಲ್ಎಲ್ಎಮ್(ಸ್ನಾತಕೋತ್ತರ ಕಾನೂನು ಪದವಿ)ನ ಪ್ರಥಮ ಸೆಮಿಸ್ಟರ್ನಲ್ಲಿ ಬಾಕಿಯಾಗಿದ್ದ ವಿಷಯಗಳಲ್ಲಿ ಪರೀಕ್ಷೆ ಬರೆದಿದ್ದಳು. ಆದರೆ ಮಂಗಳವಾರ ಮೂರನೇ ಸೆಮಿಸ್ಟರ್ನ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ. ವಿದ್ಯಾರ್ಥಿಗಳಿಗೆ ಕನಿಷ್ಟ 75% ಹಾಜರಾತಿಯ ಅಗತ್ಯವಿದ್ದು ಈಕೆಗೆ ಹಾಜರಾತಿಯ ಕೊರತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಜರಾತಿಯ ಕೊರತೆಯಿದ್ದ ಕಾರಣ ವಿದ್ಯಾರ್ಥಿನಿಗೆ ಪ್ರವೇಶ ಪತ್ರ ನೀಡಿಲ್ಲ. ಹಾಜರಾತಿಯ ಕೊರತೆಯಿದ್ದರೂ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ನ್ಯಾಯಾಲಯ ಸೂಚಿಸಿಲ್ಲ ಎಂದು ಎಂಜೆಪಿ ರೋಹಿಲ್ಖಂಡ್ ವಿವಿಯ ಕಾನೂನು ವಿಭಾಗದ ಮುಖ್ಯಸ್ಥ ಅಮಿತ್ ಸಿಂಗ್ ಹೇಳಿದ್ದಾರೆ.
ತನ್ನ ಸಹಚರರೊಂದಿಗೆ ಚಿನ್ಮಯಾನಂದನನ್ನು ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾಳೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯುವತಿಯನ್ನು ಈಗ ಶಹಜಹಾನ್ಪುರ ಜೈಲಿನಲ್ಲಿ ಬಂಧನದಲ್ಲಿರಿಸಲಾಗಿದೆ. ಸೋಮವಾರದ ಪರೀಕ್ಷೆ ಬರೆಯಲು ಈಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.