ದಲಿತ ಸಂಘಟನೆಗಳಿಂದ ಸಂವಿಧಾನ ಸಂರಕ್ಷಣಾ ಪ್ರತಿಜ್ಞೆ

ಮಂಗಳೂರು, ನ.26: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಅವಮಾನಿಸುವ ಕೃತ್ಯವನ್ನು ಖಂಡಿಸಿ ಮತ್ತು ಸಂವಿಧಾನವನ್ನು ಸಂರಕ್ಷಿಸುವ ಸಲುವಾಗಿ ದ.ಕ.ಜಿಲ್ಲಾ ದಲಿತ ಸಂಘಟನೆಗಳ ನೇತೃತ್ವದಲ್ಲಿ ಸಂವಿಧಾನ ಸಂರಕ್ಷಣಾ ಪ್ರತಿಜ್ಞೆ ಕಾರ್ಯಕ್ರಮವು ನಗರದ ಪುರಭವನದ ಮುಂದಿನ ಅಂಬೇಡ್ಕರ್ ಪ್ರತಿಮೆಯ ಬಳಿ ಮಂಗಳವಾರ ಜರುಗಿತು.
ಕುದ್ಮುಲ್ ರಂಗರಾವ್ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್. ಕೇಶವ ಧರಣಿ ಮಾತನಾಡಿ ಅಂಬೇಡ್ಕರ್‌ರ ಸಾಧನೆಯ ಬಗ್ಗೆ ಸ್ಪಷ್ಟ ಅರಿವಿದ್ದರೂ ಕೂಡಾ ಸಂವಿಧಾನ ವಿರೋಧಿಗಳು ಅವರನ್ನು ಅವಮಾನಿಸಲು ಷಡ್ಯಂತ್ರ ಮಾಡುತ್ತಲೇ ಇರುತ್ತಾರೆ. ಶಿಕ್ಷಣ ಇಲಾಖೆಯು ಇತ್ತೀಚೆಗೆ ಅಂಬೇಡ್ಕರ್‌ರನ್ನು ಅವಮಾನಿಸುವ ಉದ್ದೇಶದಿಂದಲೇ ಬಾಲಿಶ ಹೇಳಿಕೆಯನ್ನು ನೀಡಿವೆ. ಇಂದು ದೇಶದಲ್ಲಿ ಕಿಂಚಿತ್ತಾದರೂ ಪ್ರಜಾಪ್ರಭುತ್ವ ಉಳಿದಿದ್ದರೆ ಅದಕ್ಕೆ ಅಂಬೇಡ್ಕರ್‌ರ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನವೇ ಕಾರಣವಾಗಿದೆ. ಅಂತಹ ಸಂವಿಧಾನಕ್ಕೆ ಅಪಮಾನ ಆಗುವ ಯಾವುದೇ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ. ದೇವದಾಸ್ ಮಾತನಾಡಿ ವಿಶ್ವದಲ್ಲಿ ಭಾರತಕ್ಕೆ ಅತ್ಯಂತ ಪ್ರಬಲ ಪ್ರಜಾಪ್ರಭುತ್ವವನ್ನು ನೀಡಿರುವ ಸಂವಿಧಾನದ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸುವ ಅಗತ್ಯವಿದೆ. ದೇಶದ ಸಂವಿಧಾನವನ್ನು ವಿವಿಧ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಶಿಕ್ಷಣ ಇಲಾಖೆಯು ಇತ್ತೀಚೆಗೆ ಹೊರಡಿಸಿದ ಸಂವಿಧಾನ ಸುತ್ತೋಲೆ ಕೈಪಿಡಿಯಲ್ಲಿ ಸಂವಿಧಾನವನ್ನು ಡಾ. ಬಿ.ಆರ್. ಅಂಬೆಡ್ಕರ್ ಒಬ್ಬರೇ ಬರೆದದ್ದಲ್ಲ ಎಂದು ಉಲ್ಲೇಖಿಸಿರುವುದು ಖಂಡನೀಯ. ಇಂಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯ ಸಂಘಟನೆಯ ಅಧ್ಯಕ್ಷ ವಾಸುದೇವ ಉಚ್ಚಿಲ್, ದಸಂಸ ಮುಖಂಡರಾದ ಅಶೋಕ್ ಕೊಂಚಾಡಿ, ಶೇಖರ ಹೆಜಮಾಡಿ, ಶೇಖರ ಚಿಲಿಂಬಿ, ರಘುನಾಥ ಉಳ್ಳಾಲ್, ರಮೇಶ್ ಕೋಟ್ಯಾನ್, ಎಸ್.ಪಿ.ಆನಂದ, ವಿಶುಕುಮಾರ್, ಚಂದ್ರ ಕುಮಾರ್, ರಘುರಾಜ್ ಕದ್ರಿ, ಸುಧಾಕರ ಬಿ.ಎಸ್. ಮತ್ತಿತರರು ಪಾಲ್ಗೊಂಡಿದ್ದರು.










