ಮಂಗಳೂರು : ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್ ಕಳವು
ಪೊಲೀಸರಿಂದ ಧ್ವನಿವರ್ಧಕ ಮೂಲಕ ಜನಜಾಗೃತಿ

ಮಂಗಳೂರು, ನ. 26: ನಿಲ್ಲಿಸಿದ್ದ ಕಾರುಗಳ ಗಾಜು ಒಡೆದು ಒಳಗಿದ್ದ ಲ್ಯಾಪ್‌ಟಾಪ್ ಹಾಗೂ ಬ್ಯಾಗ್ ಕಳವು ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳು ಹಂಪನಕಟ್ಟೆ ಹಾಗೂ ಜ್ಯೋತಿ- ಹಂಪನಕಟ್ಟೆ ರಸ್ತೆಯಲ್ಲಿ ನಡೆದಿವೆ.
ಪ್ರಕರಣ 1: ಹಂಪನಕಟ್ಟೆ ಮಿನಿವಿಧಾನಸೌಧ ಬಳಿ ವ್ಯಕ್ತಿಯೋರ್ವರು ಬೆಳಗ್ಗೆ ಸುಮಾರು 11 ಗಂಟೆಗೆ ಕಾರು ನಿಲ್ಲಿಸಿ ತೆರಳಿದ್ದರು. ಸಂಜೆ ವಾಪಾಸು ಬಂದು ನೋಡಿದಾಗ ಕಾರಿನ ಗಾಜು ಒಡೆದಿರುವದು ಕಂಡುಬಂದಿದೆ. ಪರಿಶೀಲಿಸಿದಾಗ ಕಾರಿನ ಒಳಗಡೆ ಬಟ್ಟೆಗಳನ್ನು ಇಟ್ಟಿದ್ದ ಬ್ಯಾಗ್ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಕಳವು ಆಗಿರುವ ಸೊತ್ತಿನ ಮೌಲ್ಯ ಸುಮಾರು 5,000 ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ 2: ಜ್ಯೋತಿ ವೃತ್ತದಿಂದ ಹಂಪನಕಟ್ಟೆಗೆ ಬರುವ ರಸ್ತೆಯಲ್ಲಿ ಹೊಟೇಲೊಂದರ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಒಳಗಿದ್ದ ಲ್ಯಾಪ್‌ಟಾಪ್ ಕಳವು ಮಾಡಿರುವ ಘಟನೆ ನಡೆದಿದೆ. ಈ ಕುರಿತು ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕತ್ತಿನಿಂದ ಸರ ಕಸಿದು ಪರಾರಿ
ಮಂಗಳೂರು ನಗರದ ಬಳ್ಳಾಲ್‌ಭಾಗ್ ಸಮೀಪ ಒಳರಸ್ತೆಯಲ್ಲಿ ಮಹಿಳೆಯೋರ್ವರ ಕೊರಳಿನಿಂದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮಹಿಳೆ ರಾತ್ರಿ ಸುಮಾರು 8 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಯುವಕನೋರ್ವ ಸುಮಾರು 8 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸರಿಂದ ಜಾಗೃತಿ
ಸರಕಳ್ಳತನ, ಕಾರಿನ ಗಾಜು ಒಡೆದಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಬಂದರು ಪೊಲೀಸರು ಮಂಗಳವಾರ ಜೀಪಿನಲ್ಲಿ ಹಂಪನಕಟ್ಟೆ, ಸೆಂಟ್ರಲ್ ಮಾರುಕಟ್ಟೆ ಮುಂತಾದೆಡೆ ಜೀಪಿನಲ್ಲಿ ಧ್ವನಿವರ್ಧಕದ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ.









