ಪ್ರಜಾಪ್ರಭುತ್ವ ಜಾತೀಯತೆ, ಕೋಮುವಾದದಿಂದ ನರಳುತ್ತಿದೆ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಬೆಂಗಳೂರು, ನ.27: ಇಂದಿನ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವವು ಜಾತೀಯತೆ ಹಾಗೂ ಕೋಮುವಾದಗಳಿಂದ ನರಳುತ್ತಿದೆ ಎಂದು ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುದ್ಧ ಬಸವ ಗಾಂಧೀ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂವಿಧಾನದ ಆಶಯಗಳನ್ನೊತ್ತಿರುವ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಜಾತ್ಯತೀತತೆ, ಸೌಹಾರ್ದತೆಯನ್ನು ಪ್ರತಿಪಾದಿಸಿದೆ. ಆದರೆ, ಇಂದಿನ ವ್ಯವಸ್ಥೆಯು ಅದನ್ನು ಜಾತೀಯತೆಯಿಂದ ನರಳುವಂತೆ ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಸಂವಿಧಾನ ರಚನೆ ಸಂದರ್ಭದಲ್ಲಿ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಬಹು ಭಾಷೆ, ಸಂಸ್ಕೃತಿ, ಧರ್ಮ, ಜಾತಿಗಳನ್ನು ಒಳಗೊಂಡ ಬಹುತ್ವವನ್ನು ಪ್ರತಿಪಾದಿಸುವ ಸಂವಿಧಾನ ನೀಡಿದ್ದಾರೆ. ಆದರೆ, ಇಂದಿನ ಅಧಿಕಾರ ವರ್ಗವು ಪ್ರಜಾಪ್ರಭುತ್ವದ ಆಶಯಗಳನ್ನೇ ನಾಶ ಮಾಡಲು ಹೊರಟಿದ್ದಾರೆ ಎಂದರು.
ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜಕಾರಣದ ದಿಢೀರ್ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾದುವು. ಸಾಮಾಜಿಕ ನ್ಯಾಯ, ಸ್ವಾತಂತ್ರ, ಸಮಾನತೆ, ಸೌಹಾರ್ದತೆಯ ಸಂವಿಧಾನ ನಮ್ಮದಾಗಿದ್ದು, ಪ್ರಜಾಪ್ರಭುತ್ವ ಉಳಿಯಬೇಕಿದೆ ಎಂದು ತಿಳಿಸಿದರು.
ಯುವ ಕವಿಗಳು ಕೀಳರಿಮೆ ಬಿಡಬೇಕು. ಯಾವುದೇ ಕೆಲಸದಲ್ಲಿದ್ದರೂ, ಕವಿತೆ, ಕತೆ ಬರೆಯುವ ಆಸ್ತಕಿ ಇದ್ದರೆ ಬರೆಯಬೇಕು. ಓದುವುದರಿಂದ ಬರಹಗಾರ ಆಗಲಾರರು. ಹಾಗಂತ ಓದದೇ ಬರೆಯಲಾರ. ಕಾವ್ಯಕ್ಕೆ ಅನುಭವ ಮತ್ತು ಅಭಿವ್ಯಕ್ತಿ ಎರಡು ಮುಖ್ಯ. ಆಗ ಉತ್ತಮ ಕೃತಿ ಬರೆಯಲು ಸಾಧ್ಯ ಎಂದು ನುಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ಕಾವ್ಯಾಸಕ್ತರು ಒಂದು ಬಾರಿ ಓದಿದ ನಂತರ ಪದೇ ಪದೇ ಓದಬೇಕು ಎನ್ನಿಸುವಂತಹ ಕವಿತೆಗಳನ್ನು ಕವಿಗಳು ರಚಿಸಬೇಕು. ಕವಿಗಳು ಸಂವೇದನಾಶೀಲರಾಗಿ ಕವಿತೆ ರಚಿಸಬೇಕು. ಇತ್ತೀಚಿಗೆ ಯುವ ಕವಿಗಳು ಸಾಹಿತ್ಯ ಕ್ಷೇತ್ರಕ್ಕೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಕಾವ್ಯ ಕಮ್ಮಟಗಳು ಯುವಕರನ್ನು ಕಾವ್ಯ ರಚನೆ ಕಡೆ ಆಕರ್ಷಿಸುತ್ತಿವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಪಾಂಡುರಂಗಪ್ಪ ಚಕ್ರವರ್ತಿ ಅವರ ಕಾವ್ಯ ಚಿಗುರು, ಶಂಶುದ್ದೀನ್ ಎಂ.ಶ್ರವಣಗೆರೆ ಅವರ ಉಳಿದಿರುವುದೆ ನಮ್ಮ ದೇಹಗಳು ಮಾತ್ರ; ಬನ್ನಿ- ತಿನ್ನಿ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನೃತ್ಯ ನಿರ್ದೇಶಕ ನಾರಾಯಣ ಸಿಂಗ್‌ಗೆ ಡಾ. ಬಿ.ವಿ.ಹಂಸಕುಮಾರಿ ಮೇ.ಚ. ಕೋಟಪ್ಪದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಟ್ರಸ್ಟ್‌ನ ಡಾ.ಎಸ್.ರಾಮಲಿಂಗೇಶ್ವರ ಸೇರಿ ಮತ್ತಿತರರಿದ್ದರು.







