ಸಂವಿಧಾನ ದುರ್ಬಲಗೊಳಿಸುವ ಪ್ರಯತ್ನಕ್ಕೆ ‘ಸುಪ್ರೀಂ’ ಕಡಿವಾಣ: ಪ್ರೊ.ರವಿವರ್ಮಕುಮಾರ್

ಬೆಂಗಳೂರು, ನ.26: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನು ದುರ್ಬಲಗೊಳಿಸಲು ನಡೆಯುತ್ತಿರುವ ಪ್ರಯತ್ನಗಳಿಗೆ ಸುಪ್ರೀಂಕೋರ್ಟ್ ಕಡಿವಾಣ ಹಾಕುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹಿರಿಯ ನ್ಯಾಯವಾದಿ ಹಾಗೂ ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಪ್ರತಿಪಾದಿಸಿದ್ದರೆ.
ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಸಂವಿಧಾನ ದಿನಾಚರಣೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಸರಕಾರದ ಸಚಿವ ಸಂಪುಟದ ಶಿಫಾರಸ್ಸು ಇಲ್ಲದೆಯೇ ಮಹಾರಾಷ್ಟ್ರದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯಲಾಗುತ್ತದೆ. ಸಂವಿಧಾನವನ್ನು ದುರ್ಬಲಗೊಳಿಸಲು ನಡೆಯುವಂತಹ ಇಂತಹ ಚಟುವಟಿಕೆಗಳಿಗೆ ಸುಪ್ರೀಂಕೋರ್ಟ್ ಕಡಿವಾಣ ಹಾಕಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.
ಇಡೀ ದೇಶದಲ್ಲಿ ಈಗ ಸಂವಿಧಾನದ ಬಗ್ಗೆ ಚರ್ಚೆಯಾಗುತ್ತಿದೆ. ಮಧ್ಯರಾತ್ರಿಯಲ್ಲಿಯೂ ರಾಷ್ಟ್ರಪತಿ, ಪ್ರಧಾನಿ ಕಾರ್ಯಾಲಯವೂ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ನ್ಯಾಯಾಲಯಗಳು ಮಾಡುತ್ತಿವೆ ಎಂದು ರವಿವರ್ಮ ಕುಮಾರ್ ಹೇಳಿದರು.
ನ್ಯಾಯಾಲಯವನ್ನು ತೋರಿಸಿ ಜನರು ಅಸಮಾಧಾನದಿಂದ ತಪ್ಪಿಸಿಕೊಳ್ಳಲು, ಎಲ್ಲ ರಾಜಕೀಯ ಪಕ್ಷಗಳು ಅಧಿಕಾರವನ್ನು ಬುದ್ದಿಪೂರ್ವಕವಾಗಿಯೇ ನ್ಯಾಯಾಲಯ ಗಳಿಗೆ ಬಿಟ್ಟುಕೊಟ್ಟಿರುವುದು ವಿಷಾದಕರ. ಶಾಸಕಾಂಗವೇ ಇಂತಹ ಅಪಹಾಸ್ಯಕ್ಕೆ ಕಾರಣ ಎಂದು ಅವರು ತಿಳಿಸಿದರು.
ನ್ಯಾಯಾಲಯಕ್ಕೆ ದೋಷ ಕೊಡಲು ಹೋಗಲ್ಲ. ಕಾಂಗ್ರೆಸ್ ಪಕ್ಷ ಸೇರಿ ಎಲ್ಲ ಪಕ್ಷಗಳ ತಪ್ಪಿನಿಂದ ಪ್ರತಿಯೊಂದಕ್ಕೂ ನ್ಯಾಯಾಲಯಗಳನ್ನೇ ಅವಲಂಬಿಸಬೇಕಾಗಿದೆ. ಈಗ ಬರುತ್ತಿರುವ ತೀರ್ಪುಗಳಲ್ಲೂ ಇದು ಕಣ್ಣಿಗೆ ರಾಚುತ್ತಿದೆ. ಸಂವಿಧಾನದ ಮೂಲ ಉದ್ದೇಶ ಎಲ್ಲ ಸಂಸ್ಥೆಗಳು ಹಾಗೂ ಅಂಗಗಳಿಗೆ ಚೌಕಟ್ಟು ಹಾಕುವುದು ಎಂದು ರವಿವರ್ಮ ಕುಮಾರ್ ಹೇಳಿದರು.
ಕಾಂಗ್ರೆಸ್ ಮುಖಂಡ ಡಾ.ಬಿ.ಎಲ್.ಶಂಕರ್ ಮಾತನಾಡಿ, ಸಂವಿಧಾನ ಎಲ್ಲ ಕಾನೂನುಗಳ ತಾಯಿ ಆಗಿದೆ. ಸಂವಿಧಾನಕ್ಕೆ ಅನುಗುಣವಾಗಿ ಕಾನೂನುಗಳು ಇರಬೇಕು. ದೇಶ ಎಂದರೆ ಮಣ್ಣಲ್ಲ, ಮನುಷ್ಯರು ಎಂದು ಕವಿಯೊಬ್ಬರು ಹೇಳಿದ್ದಾರೆ. ಮನುಷ್ಯರಿಗಾಗಿಯೇ ಸಂವಿಧಾನ ಇದೆ. ಈ ದೇಶಕ್ಕೆ ಸಂವಿಧಾನ ಬೇಕೆಂದು ಪ್ರತಿಪಾದಿಸಿದವರು ಪಂಡಿತ ಜವಾಹರ್ ಲಾಲ್ ನೆಹರು. ಅದಕ್ಕಾಗಿ ಒಂದು ವರದಿ ನೀಡಿದ್ದರು. ಅದು ನೆಹರು ವರದಿ ಎಂದು ಕರೆಯಲಾಗುತ್ತದೆ. 1930 ರಲ್ಲಿ ಬ್ರಿಟಿಷ್ ಸರಕಾರದ ಮುಂದೆ ಈ ವರದಿ ಇರಿಸಲಾಗಿತ್ತು. ಮುಂದೆ ಸ್ವಾತಂತ್ರ್ಯ ನಂತರ 1947ರಲ್ಲಿ ಸಂವಿಧಾನ ರಚನಾ ಸಮಿತಿ ರಚಿಸಲಾಯಿತು ಎಂದು ಬಿ.ಲ್.ಶಂಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾನವ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







