ಮುಸ್ಲಿಂ ಯುವ ವೇದಿಕೆಯಿಂದ ಬಿಜೆಪಿಗೆ ಬೆಂಬಲ

ಬೆಂಗಳೂರು, ನ.26: ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ಅಹಿಂದ ಕರ್ನಾಟಕ ಮತ್ತು ಕರ್ನಾಟಕ ಮುಸ್ಲಿಂ ಯುವ ವೇದಿಕೆ ನಿರ್ಧರಿಸಿದೆ.
ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಹಿಂದ ಸಂಸ್ಥಾಪಕ ಅಧ್ಯಕ್ಷ ಕೆ. ಮುಕಡಪ್ಪ ಹಾಗೂ ಕರ್ನಾಟಕ ಮುಸ್ಲಿಂ ಯುವ ವೇದಿಕೆ ಅಧ್ಯಕ್ಷ ಅಜ್ಮಲ್ ಅಹಮ್ಮದ್, ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹಿಂದುಳಿದ ವರ್ಗಗಳ ಹಿತ ಕಾಪಾಡುವ ವಿಶ್ವಾಸ ಹೊಂದಿರುವುದರಿಂದ ಡಿ.5ರಂದು ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಅಹಿಂದ ಹಾಗೂ ಮುಸ್ಲಿಂ ಯುವ ವೇದಿಕೆ ನಿರ್ಧರಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್- ಜೆಡಿಎಸ್ ನಾಯಕರು ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ವಂಚಿಸಿದ್ದಾರೆ. ಅಹಿಂದ ಹೆಸರಿನಲ್ಲಿ 2005ರ ಚುನಾವಣೆಯಲ್ಲಿ ಗೆದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂತರ ಆ ವರ್ಗಗಳನ್ನು ನಿರ್ಲಕ್ಷಿಸುತ್ತ ಬಂದರು. ಹಾಗೆಯೇ ಜೆಡಿಎಸ್ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಈ ವರ್ಗಗಳನ್ನು ನಿರ್ಲಕ್ಷ ಮಾಡಿದ್ದರ ಪರಿಣಾಮ ಹಲವು ನಾಯಕರು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹಾಗಾಗಿ 15 ಕ್ಷೇತ್ರಗಳ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.







