ಪಿಯುಸಿ ವಿದ್ಯಾರ್ಥಿಗಳ ದತ್ತಾಂಶ ಸೋರಿಕೆ: ಉನ್ನತ ಮಟ್ಟದ ತನಿಖೆಗೆ ಎಸ್‌ಐಓ ಆಗ್ರಹ
ಬೆಂಗಳೂರು, ನ.26: ಪಿಯುಸಿ ವಿದ್ಯಾರ್ಥಿಗಳ ಖಾಸಗಿ ದತ್ತಾಂಶಗಳು ಸೋರಿಕೆಯಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಿತ್ತರವಾಗಿದ್ದು ಈ ಬಗ್ಗೆ ಉನ್ನತ ತನಿಖೆಯಾಗಬೇಕು ಮತ್ತು ತನಿಖೆಯ ನಂತರದ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಎಸ್‌ಐಓ ಕರ್ನಾಟಕ ಆಗ್ರಹಿಸಿದೆ.
ಸಿಇಟಿ ಮತ್ತು ನೀಟ್ ಪರೀಕ್ಷೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ದಾಖಲಾತಿಗೆ ಸಂಬಂಧಿಸಿದಂತೆ ಮೊಬೈಲ್ ಸಂದೇಶಗಳು ಬರುತ್ತಿದ್ದು ಉನ್ನತ ರ್ಯಾಂಕ್ ಮತ್ತು ಕಡಿಮೆ ರ್ಯಾಂಕ್ ಹೊಂದಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಶಿಕ್ಷಣ ಸಂಸ್ಥೆಗಳ ಮಧ್ಯವರ್ತಿಗಳು ಸಂದೇಶ ರವಾನಿಸುತ್ತಿದ್ದಾರೆ ಎಂದು ಎಸ್‌ಐಓ ಮಾಧ್ಯಮ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ ದೂರಿದರು.
ಪತ್ರಿಕಾ ವರದಿಯ ಪ್ರಕಾರ ವಿದ್ಯಾರ್ಥಿಗಳ ಶ್ರೈಕ್ಷಣಿಕ ಮಾಹಿತಿ, ಕುಟುಂಬದ ಹಿನ್ನೆಲೆ, ಸಂಪರ್ಕ ಮಾಹಿತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಸ್ಥಾನಗಳ ಮಾಹಿತಿಗಳು ಸೋರಿಕೆಯಾದ ಬಗ್ಗೆ ತಿಳಿದು ಬಂದಿದೆ ಎಂದು ಅವರು ತಿಳಿಸಿದರು. ಈ ಕೃತ್ಯದ ಹಿಂದಿರುವ ಮಧ್ಯವರ್ತಿಗಳು, ಇದರಲ್ಲಿ ಪಾಲ್ಗೊಂಡಿರುವ ಸರಕಾರಿ ಅಧಿಕಾರಿಗಳ ಕೈವಾಡದ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅದರೊಂದಿಗೆ ರಾಜ್ಯ ಸರಕಾರ ವಿದ್ಯಾರ್ಥಿಗಳ ಖಾಸಗಿ ಮಾಹಿತಿಗಳು ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.







