ನಿತ್ಯಾನಂದನ ಆಶ್ರಮದ ಬಳಿ ಯುವತಿ ಮೃತಪಟ್ಟ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ

PTI
ಹೊಸದಿಲ್ಲಿ, ನ.26: ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಆಶ್ರಮದ ಹೊರಭಾಗದಲ್ಲಿ ಮಹಿಳೆಯೊಬ್ಬಳು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಮೃತಮಹಿಳೆಯ ತಾಯಿ ಆಗ್ರಹಿಸಿದ್ದಾರೆ.
ಬೆಂಗಳೂರು ಹೊರವಲಯದಲ್ಲಿರುವ ನಿತ್ಯಾನಂದನ ಆಶ್ರಮದ ಹೊರಗಡೆ 2014ರ ಡಿಸೆಂಬರ್ 28ರಂದು ಸಂಗೀತಾ(24 ವರ್ಷ) ಎಂಬ ಮಹಿಳೆ ಮೃತಪಟ್ಟಿದ್ದಳು. ನಿತ್ಯಾನಂದನ ಆಶ್ರಮದೊಳಗೆ ತಮ್ಮ ಪುತ್ರಿಗೆ ಹಿಂಸೆ ನೀಡಿದ ಕಾರಣ ಆಕೆ ಮೃತಪಟ್ಟಿದ್ದಾಳೆ ಎಂದು ಸಂಗೀತಾಳ ಪೋಷಕರು ಬೆಂಗಳೂರು ಪೊಲೀಸರಲ್ಲಿ ದೂರು ದಾಖಲಿಸಿದ್ದರು.
ಆದರೆ ಬೆಂಗಳೂರು ಪೊಲೀಸರು ಈ ಪ್ರಕರಣದ ತನಿಖೆ ನಡೆಸದ ಕಾರಣ ಸಿಬಿಐ ತನಿಖೆ ನಡೆಸಬೇಕು. ಬೆಂಗಳೂರಿನಲ್ಲಿರುವ ನಿತ್ಯಾನಂದನ ಆಶ್ರಮದಲ್ಲಿ ವಾಸಿಸುತ್ತಿದ್ದ ಹಲವು ಬಾಲಕರು ಹಾಗೂ ಮಹಿಳೆಯರಿಗೆ ಚಿತ್ರಹಿಂಸೆ ನೀಡಲಾಗುತ್ತಿದ್ದು ಇವರಲ್ಲಿ ಹಲವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸಂಗೀತಾಳ ತಾಯಿ ಜಾನ್ಸಿ ರಾಣಿ ಒತ್ತಾಯಿಸಿದ್ದಾರೆ.
2010ರಲ್ಲಿ ಆಶ್ರಮಕ್ಕೆ ಸೇರಿದ್ದ ತಮಿಳುನಾಡು ಮೂಲದ ಸಂಗೀತಾ 2014ರಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಆಶ್ರಮದ ಅಧಿಕಾರಿಗಳು ಫೋನ್ ಮಾಡಿ ತಿಳಿಸಿದ್ದರು. ಆದರೆ ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಮನೆಯವರು ಪೊಲೀಸ್ ದೂರು ದಾಖಲಿಸಿದ್ದರು. ಮಗಳ ಮೃತದೇಹದ ಹಲವೆಡೆ ಗಾಯದ ಗುರುತುಗಳಿದ್ದವು. ಮಗಳನ್ನು ಆಶ್ರಮದಿಂದ ಮರಳಿ ತರಬೇಕೆಂದು ಬಯಸಿದ್ದರೂ ಆಶ್ರಮದ ಅಧಿಕಾರಿಗಳು ಆಕೆಯನ್ನು ಒಬ್ಬಂಟಿಯಾಗಿ ಭೇಟಿಯಾಗಲು ಅವಕಾಶ ನೀಡಿರಲಿಲ್ಲ ಎಂದು ಜಾನ್ಸಿ ರಾಣಿ ಆರೋಪಿಸಿದ್ದು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.