ನಿವೃತ್ತಿ ವಯಸ್ಸು 58ಕ್ಕೆ ಇಳಿಸುವ ಪ್ರಸ್ತಾವವಿಲ್ಲ: ಸರಕಾರ

ಜಿತೇಂದ್ರ ಸಿಂಗ್, PTI
ಹೊಸದಿಲ್ಲಿ, ನ.27: ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 58ಕ್ಕೆ ಇಳಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸರಕಾರ ತಿಳಿಸಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಸಿಬಂದಿ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್, ಉದ್ಯೋಗಿಗಳ ಸೇವಾನಿವೃತ್ತಿ ವಯಸ್ಸನ್ನು 60ರಿಂದ 58 ವರ್ಷಕ್ಕೆ ಇಳಿಸುವ ಯಾವುದೇ ಪ್ರಸ್ತಾವ ಈಗ ಸರಕಾರದ ಎದುರಿಲ್ಲ ಎಂದು ಹೇಳಿದರು.
ನಿಯತ್ತು, ಪ್ರಾಮಾಣಿಕತೆಯ ಕೊರತೆಯಿರುವ ನಿಷ್ಪ್ರಯೋಜಕ ಉದ್ಯೋಗಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಅಕಾಲಿಕವಾಗಿ (ಸೇವಾವಧಿ ಮುಗಿಯುವ ಮುನ್ನವೇ) ನಿವೃತ್ತಿಗೊಳಿಸುವ ಪೂರ್ಣ ಅಧಿಕಾರ ಕೇಂದ್ರ ನಾಗರಿಕ ಸೇವಾ (ಪಿಂಚಣಿ) ನಿಯಮ, 1972 ಮತ್ತು ಅಖಿಲ ಭಾರತ ಸೇವಾ ನಿಯಮ(ಮರಣ ತಥಾ ನಿವೃತ್ತಿ ಸೌಲಭ್ಯ) 1958ರಡಿ ಸರಕಾರಕ್ಕಿದೆ. ಮೂರು ತಿಂಗಳ ನೋಟಿಸ್ ನೀಡಿ ಅಥವಾ ನೋಟಿಸ್ ನೀಡದಿದ್ದರೆ ಮೂರು ತಿಂಗಳ ವೇತನ ಮತ್ತು ಭತ್ಯೆ ನೀಡಿ ಕಡ್ಡಾಯವಾಗಿ ನಿವೃತ್ತಿಗೊಳಿಸಬಹುದು.
ಇಂತಹ ವ್ಯವಸ್ಥೆ ‘ಎ’ ಅಥವಾ ‘ಬಿ’ ಗ್ರೂಫ್ನ ಸರಕಾರಿ ಉದ್ಯೋಗಿಗಳಿಗೆ, ಅರೆ-ಶಾಶ್ವತ ಅಥವಾ ತಾತ್ಕಾಲಿಕ ನೇಮಕವಾದ ಉದ್ಯೋಗಿಗಳಿಗೆ ಮತ್ತು 35 ವರ್ಷದೊಳಗೆ ಸೇವೆಗೆ ಸೇರ್ಪಡೆಯಾಗಿದ್ದು 50 ವರ್ಷ ದಾಟಿರುವ ಉದ್ಯೋಗಿಗಳಿಗೆ ಅನ್ವಯವಾಗುತ್ತದೆ. ಉಳಿದಂತೆ 55 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.





