ಉಪಚುನಾವಣೆ: ಕಾರ್ಮಿಕರಿಗೆ ವೇತನ ಸಹಿತ ಕಡ್ಡಾಯ ರಜೆಗೆ ಆದೇಶ

ಬೆಂಗಳೂರು, ನ.27: ವಿಧಾನಸಭೆ 15 ಕ್ಷೇತ್ರಗಳ ಉಪಚುನಾವಣೆಗೆ ಡಿ.5ರಂದು ಮತದಾನ ನಡೆಯುತ್ತಿರುವುದರಿಂದ ಅಲ್ಲಿನ ಕಾರ್ಮಿಕರಿಗೆ ವೇತನ ಸಹಿತಿ ಕಡ್ಡಾಯ ರಜೆಗೆ ಕಾರ್ಮಿಕ ಇಲಾಖೆ ಆದೇಶಿಸಿದೆ.
ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಬಡಾವಣೆ, ಶಿವಾಜಿನಗರ, ಹೊಸಕೋಟೆ, ಕೃಷ್ಣರಾಜಪೇಟೆ ಹಾಗೂ ಹುಣಸೂರು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ರಜೆ ಘೋಷಿಸಲಾಗಿದೆ.
ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1963 ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾ ದಿನಗಳು) ಕಾಯ್ದೆಯ ಕಲಂ 3-ಎ ಹಾಗೂ 1951 ರ ಪ್ರಜಾ ಪ್ರತಿನಿಧಿ ಕಾಯ್ದೆಯ ಕಲಂ 135 (ಬಿ) ರಡಿಯಲ್ಲಿ ವೇತನಸಹಿತ ರಜೆ ಘೋಷಿಸಿ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸುವುದಕ್ಕಾಗಿ ಎಲ್ಲಾ ಸಂಸ್ಥೆಗಳು, ನಿಯೋಜಕರು ಅನುವು ಮಾಡಿ ಕೊಡಬೇಕಾಗಿರುತ್ತದೆ. ಕಾರ್ಮಿಕರಿಗೆ ರಜೆ ನೀಡದೆ ಕಾನೂನು ಉಲ್ಲಂಘನೆ ಮಾಡುವ ಸಂಘ, ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.







