ಹಾರಿಕೆಯ ಉತ್ತರಕ್ಕೆ ಅಧಿಕಾರಿಗಳ ವಿರುದ್ಧ ಕೆಂಡಕಾರಿದ ಜಿಪಂ ಸದಸ್ಯರು
ಉಡುಪಿ ಜಿಪಂ ಸಾಮಾನ್ಯ ಸಭೆ

ಉಡುಪಿ, ನ.27: ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಗಳೊಂದಿಗೆ ಸಿದ್ಧರಾಗಿ ಸಭೆಗೆ ಬಾರದೇ, ಅಸಮರ್ಪಕ ಹಾಗೂ ಹಾರಿಕೆ ಉತ್ತರ ನೀಡುವ ಅಧಿಕಾರಿಗಳ ವರ್ತನೆಯಿಂದ ಸಿಟ್ಟಿಗೆದ್ದ ಜಿಪಂ ಸದಸ್ಯರು, ಅಧ್ಯಕ್ಷರಾದಿಯಾಗಿ ಅಧಿಕಾರಿಗಳ ವಿರುದ್ಧ ಕೆಂಡಕಾರಿ ಸಭೆಯನ್ನು ಅರ್ಧದಲ್ಲೇ ನಿಲ್ಲಿಸಲು ಮುಂದಾದ ಘಟನೆ ಬುಧವಾರ ನಡೆದ ಉಡುಪಿ ಜಿಲ್ಲಾ ಪಂಚಾಯತ್‌ನ 18ನೇ ಸಾಮಾನ್ಯ ಸಭೆಯಲ್ಲಿ ಕಂಡುಬಂತು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ದಿನಕರಬಾಬು ಅಧ್ಯಕ್ಷತೆಯಲ್ಲಿ ನಡೆದ 18ನೇ ಸಾಮಾನ್ಯ ಸಭೆಯಲ್ಲಿ ವಿಪಕ್ಷದ ಜನಾರ್ದನ ತೋನ್ಸೆ ಅವರು ಹಾವಂಜೆ ಗ್ರಾಮದ ಅಂಗನವಾಡಿಯ ಆರ್‌ಟಿಸಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಅವರು ಉತ್ತರ ನೀಡುವಾಗ ಸ್ವಲ್ಪ ತಡವರಿಸಿದರು. ತೋನ್ಸೆ ಕೇಳಿದ ಕೆಲವು ಪೂರಕ ಪ್ರಶ್ನೆಗಳಿಗೆ ಅವರು ಸ್ಪಷ್ಟ ಉತ್ತರ ನೀಡದಿದ್ದಾಗ ತೋನ್ಲೆ ಮತ್ತು ಉಳಿದ ಸದಸ್ಯರು ಅವರನ್ನು ತರಾಟೆಗೆ ತೆಗೆದುಕೊಂಡರು.
ಉಳಿದ ಸದಸ್ಯರು ಅಂಗನವಾಡಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಂಕಿ ಅಂಶಗಳನ್ನು ಕೇಳಿದಾಗಲೂ ಅವರು ಉತ್ತರಿಸಲು ವಿಳಂಬಿಸಿದಾಗ, ಅಧ್ಯಕ್ಷರು ಸೇರಿದಂತೆ ಸದಸ್ಯರು ಪಕ್ಷ ಬೇಧ ಮರೆತು ಅಧಿಕಾರಿಗಳ ವಿರುದ್ಧ ಮುಗಿಬಿದ್ದರು.
‘ಅಧಿಕಾರಿಗಳು ಯಾವುದೇ ಪೂರ್ವಸಿದ್ಧತೆಗಳಿಲ್ಲದೇ ಸಭೆಗೆ ಬರುತ್ತಾರೆ. ನಾವು ಕೇಳಿದ ಪ್ರಶ್ನೆಗಳಿಗೆ ಕಾಟಾಚಾರಕ್ಕೆಂಬಂತೆ ಉತ್ತರ ನೀಡುತ್ತಾರೆ. ಯಾವುದೇ ಒಂದು ಕೆಲಸವನ್ನು ಮಾಡುವುದಿಲ್ಲ. ಇಂದು ಏನೋ ಉತ್ತರ ನೀಡಿದರೆ ಮತ್ತೆ 2-3 ತಿಂಗಳು ಆರಾಮವಾಗಿರುತ್ತಾರೆ. ಇಂಥ ಅಧಿಕಾರಿಗಳಿಂದಾಗಿ ನಮ್ಮ ಯಾವುದೇ ಕೆಲಸ ಆಗುವುದಿಲ್ಲ.’ ಎಂದು ಸದಸ್ಯರು ದೂರಿದರು.
‘ಅಧಿಕಾರಿಗಳು ಇಂಥ ಪ್ರವೃತ್ತಿ ತೋರಿದರೆ, ಸಾಮಾನ್ಯ ಸಭೆ ಮಾಡಿ ಏನು ಪ್ರಯೋಜನ. ಸಭೆ ಇಲ್ಲಿಗೆ ಸಾಕು, ಹೋಗೋಣ’ ಎಂದು ಅಧ್ಯಕ್ಷ ದಿನಕರ ಬಾಬು ಹೇಳಿದರು. ಅವರಿಗೆ ಶಿಲ್ಪ ಜಿ.ಸುವರ್ಣ, ರೇಷ್ಮಾ ಉದಯ ಶೆಟ್ಟಿ ಹಾಗೂ ಇತರ ಸದಸ್ಯರು ಬೆಂಬಲಿಸಿದರು.
‘ನೋಡಿ, ನಾನು ಅರಣ್ಯಕ್ಕೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಕಳೆದ 18 ಸಭೆಗಳಲ್ಲಿ ಕೇಳುತ್ತಾ ಬಂದಿದ್ದೇನೆ. ಕುಂದಾಪುರದ ಅರಣ್ಯಾಧಿಕಾರಿಯಿಂದ ಅದಕ್ಕಿನ್ನೂ ಪರಿಹಾರ ಸಿಕ್ಕಿಲ್ಲ. ಅದೇ ರೀತಿ ಕಳೆದ ನಾಲ್ಕೈದು ಸಭೆಗಳಲ್ಲಿ ಅಂಗನವಾಡಿ, ಸ್ಮಶಾನ ಒತ್ತುವರಿ ಕುರಿತು ಪ್ರಶ್ನೆ ಎತ್ತುತ್ತಲೇ ಇದ್ದೇನೆ. ಆದರೆ ಅವುಗಳಿಗೂ ಏನೊಂದೂ ಪರಿಹಾರ ಸಿಕ್ಕಿಲ್ಲ. ನಾವು ಕೇಳುವ ಯಾವುದೇ ಪ್ರಶ್ನೆ ಕುರಿತಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೇ ಅಸಡ್ಡೆಯ ವರ್ತನೆ ತೋರುತಿದ್ದಾರೆ.’ ಎಂದು ಜನಾರ್ದನ ತೋನ್ಸೆ ನುಡಿದರು.
ಜಿಪಂ ಸದಸ್ಯರಾಗಿ ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕಿರುವ ಅಧಿಕಾರಿಗಳು ಸಭೆಯಲ್ಲಿ ಕಾಟಾಚಾರದ, ಹಾರಿಕೆ ಉತ್ತರ ನೀಡುತಿದ್ದಾರೆ. ಗ್ರಾಪಂನ ಪಿಡಿಓ, ಒಬ್ಬ ಇಒ ಸಹ ಕೆಲಸ ಮಾಡುವುದಿಲ್ಲ. ಇಂಥ ಬೇಜವಾಬ್ದಾರಿ ಅಧಿಕಾರಿಗಳಿಂದಾಗಿ ನಾವು ಏನೂ ಕೆಲಸ ಮಾಡಲು ಸಾಧ್ಯವಿಲ್ಲ. ಸಭೆ ಮುಂದೂಡೋಣ. ಯಾಕೆ ಸಭೆ... ಯಾರಿಗೆ ಸಭೆ ಎಂದು ಶಿಲ್ಪಾ ಹಾಗೂ ರೇಷ್ಮಾ ಕಿಡಿಕಾರಿದರು.
ಕಳೆದ ಮೂರು-ಮೂರುವರೆ ವರ್ಷಗಳಲ್ಲಿ ಸರಿಯಾಗಿ ಕೆಲಸ ಮಾಡದ ಒಬ್ಬನೇ ಒಬ್ಬ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ಕನಿಷ್ಠ ನೋಟೀಸನ್ನು ಸಹ ನೀಡಿಲ್ಲ. ಇದರಿಂದ ಅವರಿಗೆ ಧೈರ್ಯ ಬಂದಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಾರಾಳಿ ಪ್ರತಾಪ್ ಹೆಗ್ಡೆ ಹಾಗೂ ರೋಹಿತ್‌ಕುಮಾರ್ ಶೆಟ್ಟಿ ನುಡಿದರು.
ಕೊನೆಗೆ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಸಭೆಯಲ್ಲಿ ಭಾಗವಹಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ, ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ಬಳಿಕ ಮತ್ತೆ ಸಭೆ ಮುಂದುವರಿಯಿತು.








