ಸೇಫ್ ಕುಂದಾಪುರ ಪ್ರಾಜೆಕ್ಟ್ ಮೂಲಕ ಸಿಸಿಟಿವಿ ಕಣ್ಗಾವಲು: ಎಸ್ಪಿ ನಿಶಾ ಜೇಮ್ಸ್

ಕುಂದಾಪುರ, ನ.27: ಪೊಲೀಸ್ ಇಲಾಖೆಯ ಹಿಡಿತದಲ್ಲಿ ಸೇಫ್ ಕುಂದಾ ಪುರ ಪ್ರಾಜೆಕ್ಟ್ ಮೂಲಕ ಕುಂದಾಪುರ ಸುತ್ತಮುತ್ತಲು ಸಿಸಿಟಿವಿ ದೃಶ್ಯಾವಳಿಗಳ ಕಣ್ಗಾವಲು ವ್ಯವಸ್ಥೆಯನ್ನು ಮಾಡಲಾಗಿದ್ದು, ಇವು ಪೊಲೀಸ್ ಇಲಾಖೆಗೆ ತನಿಖೆಯ ಸಂದರ್ಭ ಬಹಳ ಪ್ರಯೋಜನವಾಗಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವತಿಯಿಂದ ಬುಧವಾರ ಕುಂದಾಪುರ ಅಂಕದಕಟ್ಟೆಯಲ್ಲಿ ಅನುಷ್ಠಾನಗೊಳಿಸಲಾದ ಸೇಫ್ ಕುಂದಾಪುರ ಪ್ರಾಜೆಕ್ಟ್ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ನಿಟ್ಟಿನಲ್ಲಿ ಅಗತ್ಯ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಇಲಾಖೆಯಿಂದ ಸಾರ್ವಜನಿಕರಿಗೆ ಸೂಕ್ತ ಮಾರ್ಗರ್ಶನ ನೀಡಲಾಗುವುದು ಎಂದರು.
ಅಪರಾಧ ಘಟನೆಗಳು ನಡೆದ ಸಂದರ್ಭದಲ್ಲಿ ನಿಜಾಂಶಗಳನ್ನು ತಿಳಿದು ಕೊಳ್ಳಲು ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳು ಅತ್ಯಂತ ಉಪಯುಕ್ತವಾಗಲಿದ್ದು, ಇದರಿಂದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ದೂರು ನೀಡಲು ಸಾಧ್ಯವಾಗುವು ದಿಲ್ಲ. ವಾಹನಗಳ ಅಪಘಾತ ಮಾಡಿ ಪರಾರಿಯಾಗುವ ವಾಹನಗಳ ಗುರುತು ಪತ್ತೆ ಹಚ್ಚಲು ಇದು ಸಹಕಾರಿಯಾಗುತ್ತದೆ. ಸಿಸಿಟಿವಿಯ ನೇರವಾಗಿ ವೀಕ್ಷಣೆ ಮಾಡುವುದರಿಂದ ಮುಂದೆ ಸಂಭವಿಸಬಹುದಾದ ಅಪರಾಧವನ್ನು ತಡೆಯಲು ಸಾಧ್ಯವಾುತ್ತದೆ ಎಂದು ಅವರು ಹೇಳಿದರು.
ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾತನಾಡಿ, ಅತ್ಯಂತ ವಿಶಿಷ್ಠವಾದ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು, ತಡ ರಾತ್ರಿಯಲ್ಲಿ ನಡೆಯುವ ಕಳ್ಳತನಗಳ ಮಾಹಿತಿ ದೊರಕುವುದರಿಂದ ಕೃತ್ಯಗಳು ನಡೆಯದಂತೆ ತಡೆಯಲು ಸಾಧ್ಯವಾಗುತ್ತದೆ. ಸಿಸಿ ಕ್ಯಾಮರಾ ಅಳವಡಿಸುವಾಗ ಅಗತ್ಯ ಸ್ಥಳಗಳಲ್ಲಿ ಹಾಗೂ ಬೆಳಕಿನ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ನೀಡುವ ಪ್ರಯತ್ನ ಸಾರ್ವಜನಿಕರಿಗೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕೋಟೇಶ್ವರದ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್, ಕೋಟೇಶ್ವರ ಗ್ರಾಪಂ ಉಪಾಧ್ಯಕ್ಷ ಉದಯ್, ಅನಂತಾ ಹರಿರಾಂ ಶಂಕರ್, ಸೈನ್ ಇನ್ ಸೆಕ್ಯುರಿಟಿಯ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ವಸಂತ ಗಿಳಿಯಾರ್ ಕಾರ್ಯಕ್ರಮ ನಿರೂಪಿಸಿ ದರು.
ಖಾಸಗಿ ಸಹಭಾಗಿತ್ವದ ವಿಶಿಷ್ಟ ಯೋಜನೆ
ಖಾಸಗಿ ಸಹಭಾಗಿತ್ವದಲ್ಲಿ ಪೊಲೀಸರ ಮಾರ್ಗದರ್ಶನದಲ್ಲಿ ನಡೆಯುವ ಈ ಯೋಜನೆಯಂತೆ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆ ಸಾರ್ವಜನಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಸಿಸಿಟಿವಿ ಆಳವಡಿಸಿಕೊಡಲಾಗಿದೆ. ಈ ಸಿಸಿಟಿವಿಗಳ ದೃಶ್ಯಾವಳಿ ಯನ್ನು ಸಂಸ್ಥೆಯು ರಾತ್ರಿ 8ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವೀಕ್ಷಣೆ ಮಾಡ ಲಾಗಿದೆ. ಈ ದೃಶ್ಯಾವಳಿಯನ್ನು ನೇರಪ್ರಸಾರದಂತೆ ವೀಕ್ಷಿಸಲಾಗು ತ್ತದೆಯೇ ಹೊರತು ಯಾವುದೇ ದಾಖಲಾಗುವುದಿಲ್ಲ. ಈ ತಂಡಕ್ಕೆ ಮಾರ್ಗದರ್ಶಕರಾಗಿ ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಿಸ ಲಾಗುತ್ತದೆ. ಅಕಸ್ಮಾತ್ ಸಿಸಿಟಿವಿ ದೃಶ್ಯಾವಳಿ ವೀಕ್ಷಣೆ ಸಂದರ್ಭ ಯಾವುದೇ ಅಪರಿಚಿತ, ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡರೆ ಪೊಲೀಸರು ಕೂಡಲೇ ಕಾರ್ಯಾಚರಣೆ ಮಾಡಲಿದ್ದಾರೆ. ಅದೇ ರೀತಿ ಸಿಸಿಟಿವಿ ಅಳವಡಿಸಿರುವ ಮಾಲಕರಿಗೆ ಈ ಕುರಿತು ಮಾಹಿತಿ ರವಾನಿಸಲಾಗುತ್ತದೆ.
ಸದ್ಯ 5 ಎಲ್ಇಡಿ ಟಿವಿ, ಲ್ಯಾಪ್‌ಟಾಪ್ ಮೂಲಕ ಪ್ರತಿನಿತ್ಯ ಮಾನಿಟರಿಂಗ್ ವ್ಯವಸ್ಥೆಯನ್ನು ಸೈನ್‌ಇನ್ ಸೆಕ್ಯೂರಿಟಿ ಸಂಸ್ಥೆ ಅಂಕದಕಟ್ಟೆಯಲ್ಲಿ ಮಾಡಲಿದೆ. ಈಗಾಗಲೇ 60ಕ್ಕೂ ಅಧಿಕ ಸಿಸಿಟಿವಿ ಅಳವಡಿಸಲಾಗಿದೆ ಎಂದು ಸೈನ್ ಇನ್ ಸೆಕ್ಯುರಿಟಿಯ ಮಾಲಕ ಕೃಷ್ಣ ತಿಳಿಸಿದ್ದಾರೆ.







