ಅನರ್ಹ ಶಾಸಕ ಬರೆದ ಪತ್ರ ಓದಿ ಕಣ್ಣೀರಿಟ್ಟ ಕುಮಾರಸ್ವಾಮಿ

ಮಂಡ್ಯ, ನ.27: ಅನರ್ಹ ಶಾಸಕ ನಾರಾಯಣಗೌಡ ಈ ಹಿಂದೆ ತನಗೆ ಬರೆದಿದ್ದ ಪತ್ರವನ್ನು ಸಭೆಯಲ್ಲಿ ಓದಿದ ಕುಮಾರಸ್ವಾಮಿ ಅವರು ನಾರಾಯಣಗೌಡ ನನಗೆ ದೊಡ್ಡ ಮೋಸ ಮಾಡಿದ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.
ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯ ಸಂತೇಮಾಳದಲ್ಲಿ ಬುಧವಾರ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ, ನಾರಾಯಣಗೌಡ ಈ ಹಿಂದೆ ತನಗೆ ಬರೆದಿದ್ದ ಪತ್ರವನ್ನು ಓದಿದರು. ‘ನಾನು ಅನಾಥ. ದೇವೇಗೌಡ ಚೆನ್ನಮ್ಮಾಜಿಯೇ ತಂದೆ ತಾಯಿ. ನೀವೇ ನನ್ನ ನಂಬುಗೆಯ ಸಹೋದರ. ನಿಮ್ಮಿಂದಲೇ ಶಾಸಕನಾಗಿದ್ದೀನಿ. ನಿಮ್ಮ ಸಹಕಾರವನ್ನು ಜನ್ಮಪೂರ್ತಿ ಸ್ಮರಿಸುತ್ತೇನೆ’ ಎಂದು ನಾರಾಯಣಗೌಡ ಪತ್ರ ಬರೆದಿದ್ದ ಎಂದು ಅವರು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಸೋತಿದ್ದಕ್ಕೆ ಬೇಸರ ಇಲ್ಲ. ಅಧಿಕಾರ ಹೋಗಿದ್ದಕ್ಕೆ ಕಣ್ಣೀರು ಹಾಕುತ್ತಿಲ್ಲ. ಎರಡೊತ್ತು ಊಟಕ್ಕೆ ಇಷ್ಟೆಲ್ಲಾ ರಾಜಕೀಯ ಬೇಕಾಗಿಲ್ಲ. ಆದರೆ, ನಿಮ್ಮ ಪ್ರೀತಿ ಬೇಕು. ಬಡವರಿಗೋಸ್ಕರ ಇನ್ನೂ ರಾಜಕೀಯದಲ್ಲಿ ಉಳಿದುಕೊಂಡಿದ್ದೇನೆ ಎಂದು ಅವರು ಅವರು ಹೇಳಿದರು.
‘ಬಾಂಬೆ ಕಳ್ಳ’ ಈ ರೀತಿಯಾಗಿ ಮಾಡಲು ನನ್ನದೂ ತಪ್ಪಿದೆ. 2013ರಲ್ಲಿ ಈತ ಚುನಾವಣೆಗೆ ನಿಂತಾಗ ಮನೆ ಮನೆ ಸುತ್ತಿ ಗೆಲ್ಲಿಸಿದ ನನ್ನ ತಂಗಿಯನ್ನೇ ದೂರಿದ. ಕುಟುಂಬ ವಿರೋಧ ಮಾಡಿದರೂ 2018ರಲ್ಲಿ ಮತ್ತೆ ಟಿಕೆಟ್ ಕೊಟ್ಟು ಗೆಲ್ಲಿಸಿದೆ. ಆತನ ಕ್ಷೇತ್ರಕ್ಕೆ ನೂರಾರು ಕೋಟಿ ರೂ. ಅನುದಾನ ನೀಡಿದೆ ಎಂದು ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿರುದ್ಧ ಕಿಡಿಕಾರಿದರು.







